
ಹೊಸದಿಲ್ಲಿ: ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವ ಅಂತರರಾಷ್ಟ್ರೀಯ ಪ್ರಯಾಣಿಕರು ಸೆ.1ರಿಂದ ವಿಮಾನ ನಿಲ್ದಾಣಗಳಲ್ಲಿಯ ವಲಸೆ ತಪಾಸಣೆ ಕೌಂಟರ್‌ಗಳಲ್ಲಿ ಕಾಗದ ರೂಪದಲ್ಲಿಯ ಬೋರ್ಡಿಂಗ್ ಪಾಸ್ ತೋರಿಸುವ ಅಥವಾ ಅದಕ್ಕೆ ಮುದ್ರೆ ಹಾಕಿಸುವ ಅಗತ್ಯವಿರುವುದಿಲ್ಲ.ದೇಶದಲ್ಲಿಯ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಈ ಬದಲಾವಣೆಯು ಅನ್ವಯಗೊಳ್ಳಲಿದ್ದು,ಇದು ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಸುಲಭ ಮತ್ತು ಸರಳಗೊಳಿಸುವ ಉದ್ದೇಶವನ್ನು ಹೊಂದಿದೆ.

ಬ್ಯೂರೋ ಆಫ್ ಇಮಿಗ್ರೇಷನ್ ಈ ಬದಲಾವಣೆಯ ಕುರಿತು ವಿಮಾನ ನಿಲ್ದಾಣ ನಿರ್ವಾಹಕರು, ಸಿಐಎಸ್‌ಎಫ್ ಮತ್ತು ಇತರ ಪಾಲುದಾರ ಸಂಸ್ಥೆಗಳಿಗೆ ಸೂಚನೆ ನೀಡಿದೆ.ಪ್ರಸ್ತುತ ಅಸ್ತಿತ್ವದಲ್ಲಿರುವ ಪದ್ಧತಿಯಡಿ ಪ್ರಯಾಣಿಕರು ವಲಸೆ ಕೌಂಟರ್‌ನಲ್ಲಿ ಬೋರ್ಡಿಂಗ್ ಪಾಸ್‌ಗೆ ಮುದ್ರೆ ಹಾಕಿಸಬೇಕಿತ್ತು. ಆದರೆ ಅಸ್ಪಷ್ಟವಾಗಿ ಬೀಳುವ ಸೀಲ್‌ಗಳಿಂದ ವಿವರಗಳನ್ನು ಓದಲು ತೊಂದರೆಯಾಗುತ್ತಿತ್ತು. ಹೀಗಾಗಿ ಸೆಪ್ಟೆಂಬರ್‌ನಿಂದ ಇದನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ.



ಪ್ರಯಾಣಿಕರು ಇನ್ನು ಮುಂದೆ ತಮ್ಮ ಮೊಬೈಲ್‌ನಲ್ಲಿರುವ ಇ-ಬೋರ್ಡಿಂಗ್ ಪಾಸ್‌ಗಳನ್ನು ತೋರಿಸಿ ವಲಸೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆದಾಗ್ಯೂ ಕಾಗದದ ಬೋರ್ಡಿಂಗ್ ಪಾಸ್ ಬಳಸಲು ಬಯಸುವವರಿಗೆ ಆ ಅವಕಾಶ ಮುಂದುವರಿಯಲಿದೆ. ಆದರೆ ಅದಕ್ಕೂ ಸಹ ವಲಸೆ ಕೌಂಟರ್‌ನಲ್ಲಿ ಮುದ್ರೆ ಹಾಕಲಾಗುವುದಿಲ್ಲ. ಈ ಹೊಸ ವ್ಯವಸ್ಥೆಯು ದೇಶಾದ್ಯಂತ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ.








