Saturday, September 26, 2026
spot_imgspot_img
spot_imgspot_img

ಹಣಕಾಸಿನ ವಿಚಾರಕ್ಕೆ ಜಗಳ; ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ-ಶವವನ್ನು ಹಾಸಿಗೆಯಲ್ಲಿ ಸುತ್ತಿ ಖಾಲಿ ನಿವೇಶನಕ್ಕೆ ಎಸೆದ ಪತಿ ಬಂಧನ

- Advertisement -
- Advertisement -

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡಿದ ಪತಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದು, ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ಖಾಲಿ ನಿವೇಶನದಲ್ಲಿ ಎಸೆದು ಪರಾರಿಯಾಗಿದ್ದ ಪ್ರಕರಣವನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿ ಸಾಗರ್ ಚಂದ್ರ ರಾವತ್ (32)ನನ್ನು ಬಂಧಿಸಲಾಗಿದೆ.

ಒಡಿಶಾ ಮೂಲದ ಅನುಸೂಯ (28) ಕೊಲೆಯಾದ ಮಹಿಳೆ. ಅನುಸೂಯ ಹಾಗೂ ಸಾಗರ್ ಚಂದ್ರ ರಾವತ್ ಪ್ರೀತಿಸಿ ವಿವಾಹವಾಗಿದ್ದು, ಬೆಂಗಳೂರಿನ ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು.ಆ.11ರಂದು ಹಣಕಾಸಿನ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಸಾಗರ್ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಬಳಿಕ ಮೂರು ದಿನಗಳ ಕಾಲ ಮೃತದೇಹವನ್ನು ಮನೆಯಲ್ಲೇ ಇರಿಸಿಕೊಂಡಿದ್ದ ಆರೋಪಿ, ನಂತರ ಶವವನ್ನು ಹಾಸಿಗೆಯಲ್ಲಿ ಸುತ್ತಿ ಸಂಪಿಗೆಹಳ್ಳಿ ಸಮೀಪದ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನದಲ್ಲಿ ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಇತ್ತ ನಿವೇಶನವನ್ನು ಸ್ವಚ್ಛಗೊಳಿಸಲು ಮಾಲಕರು ಕಾರ್ಮಿಕರನ್ನು ಕಳುಹಿಸಿದ್ದರು. ಈ ವೇಳೆ ಕೊಳೆತ ಸ್ಥಿತಿಯಲ್ಲಿದ್ದ, ನಾಯಿಗಳು ಕಚ್ಚಿ ತಿಂದಿದ್ದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.

ಮಾಹಿತಿ ಪಡೆದ ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ತನಿಖೆ ವೇಳೆ ಮೃತದೇಹದ ಮೇಲಿದ್ದ ಬಟ್ಟೆಯ ಟ್ಯಾಗ್ ಪೊಲೀಸರಿಗೆ ಪ್ರಮುಖ ಸುಳಿವು ನೀಡಿದೆ. ಟ್ಯಾಗ್ ಆಧರಿಸಿ ಬಿಲ್‌ನ ವಿವರಗಳನ್ನು ಪರಿಶೀಲಿಸಿದ ಪೊಲೀಸರು ಮೃತ ಮಹಿಳೆಯ ಗುರುತನ್ನು ಪತ್ತೆಹಚ್ಚಿದ್ದಾರೆ. ಬಳಿಕ ತನಿಖೆ ಚುರುಕುಗೊಳಿಸಿ, ಕೊಲೆ ನಡೆದ ಸುಮಾರು 20 ದಿನಗಳ ಬಳಿಕ ಆರೋಪಿ ಪತಿ ಸಾಗರ್ ಚಂದ್ರ ರಾವತ್‌ನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!