Wednesday, June 24, 2026
spot_imgspot_img
spot_imgspot_img

ʼಆಪರೇಷನ್ ತೂಫಾನ್ʼ: ಮಾದಕ ವಸ್ತು ನಿಗ್ರಹ ಕಾರ್ಯಾಚರಣೆಗೆ ಸಹಕಾರ ಕೋರಿ ಕರ್ನಾಟಕ, ತಮಿಳುನಾಡು, ಪುದುಚೇರಿ ಸರಕಾರಗಳಿಗೆ ಪತ್ರ ಬರೆದ ಕೇರಳಂ ಸಿಎಂ

- Advertisement -
- Advertisement -

ತಿರುವನಂತಪುರಂ: ಮಾದಕ ವಸ್ತು ನಿಗ್ರಹ ಕಾರ್ಯಾಚರಣೆಗೆ ಅಂತಾರಾಜ್ಯ ಸಹಕಾರ ಬಲವರ್ಧನೆಯಾಗಬೇಕಾದ ಅಗತ್ಯವಿದೆ ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ ಕರೆ ನೀಡಿದ್ದಾರೆ. ಕೇರಳಂನಾದ್ಯಂತ ‘ಆಪರೇಷನ್ ತೂಫಾನ್’ ಕಾರ್ಯಾಚರಣೆ ಮುಂದುವರಿದಿರುವ ಬೆನ್ನಿಗೇ, ಮಾದಕ ವಸ್ತು ಕಳ್ಳಸಾಗಣೆ ಜಾಲವನ್ನು ಬಗ್ಗುಬಡಿಯಲು ನೆರೆಯ ರಾಜ್ಯಗಳ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಯಬೇಕಾದ ಅಗತ್ಯವಿದೆ ಎಂದೂ ಅವರು ಒತ್ತಿ ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿ.ಡಿ.ಸತೀಶನ್, “ಕೇರಳದ ಉಪಕ್ರಮವಾದ ಮಾದಕ ವಸ್ತು ವಿರೋಧಿ ಕಾರ್ಯಾಚರಣೆಯನ್ನು ಬಲವರ್ಧನೆಗೊಳಿಸಲು ಹಾಗೂ ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ಜಾಲವನ್ನು ಬಗ್ಗುಬಡಿಯಲು ಸುಧಾರಿತ ಸಹಕಾರ ಕೋರಿ ಕರ್ನಾಟಕ, ತಮಿಳುನಾಡು ಹಾಗೂ ಪುದುಚೇರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ” ಎಂದು ಹೇಳಿದ್ದಾರೆ.

“ಮಾದಕ ವಸ್ತು ಪಿಡುಗನ್ನು ಮೂಲೋತ್ಪಾಟನೆ ಮಾಡಲು ನೈಜ ಸಮಯದ ಗುಪ್ತಚರ ಮಾಹಿತಿ ಹಂಚಿಕೆ, ಜಂಟಿ ಕಾರ್ಯಾಚರಣೆಗಳು ಹಾಗೂ ಸಮನ್ವಯದ ಯೋಜನೆಗಳು ಅತ್ಯಗತ್ಯವಾಗಿದೆ. ಜಂಟಿ ಕ್ರಿಯಾ ಯೋಜನೆಯನ್ನು ರೂಪಿಸಲು ಹಾಗೂ ಮಾದಕ ವಸ್ತುಗಳ ವಿರುದ್ಧ ಜಂಟಿ ಹೋರಾಟವನ್ನು ಖಾತರಿಪಡಿಸಲು ನಾನು ಉನ್ನತ ಮಟ್ಟದ ಸಭೆಯೊಂದರ ಪ್ರಸ್ತಾವ ಮಂಡಿಸಿದ್ದೇನೆ. ಗೃಹ ಸಚಿವ ರಮೇಶ್ ಚೆನ್ನಿತ್ತಲ ನೇತೃತ್ವದಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥ ರವಡ ಚಂದ್ರಶೇಖರ್ ಹಾಗೂ ಟ್ಯಾಕ್ಟಿಕಲ್ ಕಮಾಂಡರ್ ಪುಟ್ಟ ವಿಮಲಾದಿತ್ಯ ಅವರು ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ವಿರುದ್ಧದ ಸಮನ್ವಯಿತ ಹೋರಾಟದ ಪ್ರಯತ್ನಗಳನ್ನು ಬಲಪಡಿಸಲು ಕರ್ನಾಟಕ, ತಮಿಳುನಾಡು ಹಾಗೂ ಪುದುಚೇರಿಯ ಪೊಲೀಸ್ ಮುಖ್ಯೋಸ್ಥರು ಹಾಗೂ ಗೃಹ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ” ಎಂದೂ ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಜೂನ್ 2ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ರಮೇಶ್ ಚೆನ್ನಿತ್ತಲ, “ಮಾದಕ ವಸ್ತು ಕಳ್ಳಸಾಗಣೆ ಹಾಗೂ ಅದರ ಬೇರುಗಳನ್ನು ಮೂಲೋತ್ಪಾಟನೆ ಮಾಡಲು ಆರೋಗ್ಯ ಮತ್ತು ಅಬಕಾರಿ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು” ಎಂದು ಹೇಳಿದ್ದರು.

- Advertisement -

Related news

error: Content is protected !!