
ಬೆಂಗಳೂರು: ರಾಜ್ಯದಲ್ಲಿ ಹೋಂಸ್ಟೇಗಳ ಸ್ಥಾಪನೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಸಮಗ್ರ ನೀತಿ ಹಾಗೂ ಶಾಸನಬದ್ಧ ನಿಯಂತ್ರಣ ಚೌಕಟ್ಟು ರೂಪಿಸುವ ಕುರಿತು ಪರಿಶೀಲನೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಕೊಡಗು ಜಿಲ್ಲೆಯ ಕುಟ್ಟಾ ಗ್ರಾಮದ ಹೋಂಸ್ಟೇ ಮಾಲೀಕ ಪಿ.ಎ. ಪೊನ್ನಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಹೋಂಸ್ಟೇಗಳು ಕೇವಲ ವಾಣಿಜ್ಯ ಸಂಸ್ಥೆಗಳಲ್ಲ; ಸಾರ್ವಜನಿಕರಿಗೆ ವಸತಿ, ಆಹಾರ ಮತ್ತು ಇತರೆ ಸೇವೆಗಳನ್ನು ಒದಗಿಸುವ ಸ್ಥಳಗಳಾಗಿರುವುದರಿಂದ ಸಾರ್ವಜನಿಕ ಸುರಕ್ಷತೆ, ಆರೋಗ್ಯ, ನೈರ್ಮಲ್ಯ, ಗ್ರಾಹಕ ರಕ್ಷಣೆ ಹಾಗೂ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಸಣ್ಣ ಕುಟುಂಬ ಆಧಾರಿತ ಹೋಂಸ್ಟೇಗಳು ಮತ್ತು ದೊಡ್ಡ ವಾಣಿಜ್ಯ ರೆಸಾರ್ಟ್ ಮಾದರಿಯ ಹೋಂಸ್ಟೇಗಳ ನಡುವೆ ಸ್ಪಷ್ಟ ವರ್ಗೀಕರಣ ಮಾಡಬೇಕೆಂದು ಸೂಚಿಸಿರುವ ನ್ಯಾಯಾಲಯ, ಸಣ್ಣ ಮಾಲೀಕರ ಮೇಲೆ ಅನಗತ್ಯ ಹೊರೆ ಬೀಳಬಾರದು, ಆದರೆ ದೊಡ್ಡ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಅಗತ್ಯವೆಂದು ತಿಳಿಸಿದೆ.
ಅಗ್ನಿ ಸುರಕ್ಷತೆ, ಆಹಾರ ಸುರಕ್ಷತೆ, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ, ಕಟ್ಟಡ ನಿಯಮ ಪಾಲನೆ, ಅತಿಥಿಗಳ ಗುರುತಿನ ಚೀಟಿ ಪರಿಶೀಲನೆ ಹಾಗೂ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಸೇರಿದಂತೆ ಹಲವು ಮಾನದಂಡಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಹೇಳಿದೆ.ಇದೇ ವೇಳೆ, ಹೋಂಸ್ಟೇ ಪರವಾನಗಿ ರದ್ದುಗೊಳಿಸುವ ಮೊದಲು ಅರ್ಜಿದಾರರಿಗೆ ನೋಟಿಸ್ ನೀಡದಿರುವುದನ್ನು ಗಮನಿಸಿದ ನ್ಯಾಯಾಲಯ, ರದ್ದು ಆದೇಶವನ್ನು ಶೋಕಾಸ್ ನೋಟಿಸ್ ಎಂದು ಪರಿಗಣಿಸಿ ಅದಕ್ಕೆ ಉತ್ತರಿಸಲು ಅವಕಾಶ ನೀಡಿದೆ.
ಏನಿದು ಪ್ರಕರಣ:
ಅರ್ಜಿದಾರರ ಹೋಂಸ್ಟೇನಲ್ಲಿ ತಂಗಿದ್ದ ಅಮೆರಿಕದ ಮಹಿಳಾ ಪ್ರವಾಸಿಗೆಯ ಮೇಲೆ ಅಲ್ಲಿನ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೋಂಸ್ಟೇ ನೋಂದಣಿಯನ್ನು ರದ್ದುಗೊಳಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು.








