

ಮಂಗಳೂರು, ನ.16: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ. ವಿಮಾನದಲ್ಲಿದ್ದ 236 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.


ವಿಮಾನವು ಟೇಕ್ ಆಫ್ ಆಗುವ ವೇಳೆ ಇಂಜಿನ್ನಲ್ಲಿ ದೋಷ ಕಂಡು ಬಂದಿತ್ತು ಎನ್ನಲಾಗಿದೆ. ತಕ್ಷಣ ಎಚ್ಚೆತ್ತ ವಿಮಾನದ ಪೈಲಟ್ ಸಮಯ ಪ್ರಜ್ಞೆ ಮೆರೆದ ಪರಿಣಾಮ ಟೇಕ್ ಆಫ್ ಆಗುವ ಕೊನೆ ಕ್ಷಣದಲ್ಲಿ ಬ್ರೇಕ್ ಹಾಕಿದ್ದು, ಭಾರೀ ಅನಾಹುತ ತಪ್ಪಿದೆ.
ಸೋಮವಾರ ಸಂಜೆ ಮಂಗಳೂರಿನಿಂದ ಇಂಡಿಗೋ ವಿಮಾನವು ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿತ್ತು. ವಿಮಾನದಲ್ಲಿ 229 ಪ್ರಯಾಣಿಕರು ಮತ್ತು 7 ಮಂದಿ ವಿಮಾನದ ಸಿಬ್ಬಂದಿಗಳಿದ್ದರು. ರನ್ ವೇಯಲ್ಲಿ ಟೇಕ್ ಆಫ್ ಆಗುವ ವೇಳೆ ವಿಮಾನದ ಇಂಜಿನ್ನಲ್ಲಿ ತಾಂತ್ರಿಕ ದೋಷವಿರುವುದು ಪೈಲಟ್ನ ಗಮನಕ್ಕೆ ಬಂತು ಎನ್ನಲಾಗಿದೆ. ತಕ್ಷಣ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದುಬಂದಿದೆ. ಬಳಿಕ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ. ಇಂಡಿಗೋ ಸಂಸ್ಥೆಯು ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಿದೆ.







