Sunday, September 27, 2026
spot_imgspot_img
spot_imgspot_img

ಗೆಳತಿಯನ್ನು ಮದುವೆಯಾಗಲು 21 ವರ್ಷ ತುಂಬಬೇಕು ಎಂದ ತಂದೆಯನ್ನ ಗುಂಡಿಕ್ಕಿ ಕೊಂದ 18ರ ಮಗ

- Advertisement -
- Advertisement -

ಚಂಡೀಗಢ: ಪ್ರೇಯಸಿಯನ್ನು ಮದುವೆಯಾಗಲು 21 ವರ್ಷ ವಯಸ್ಸು ತುಂಬುವವರೆಗೆ ಕಾಯುವಂತೆ ಹೇಳಿದ್ದ ತಂದೆಯನ್ನು 18 ವರ್ಷದ ಮಗನೇ ಗುಂಡಿಕ್ಕಿ ಕೊಂದಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.ಪೊಲೀಸ್‌ ಪ್ರಧಾನ ಕಚೇರಿಯ ಲೆಕ್ಕಪತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸೆಬಲ್ ನಿತಿನ್ ಸಿಂಗ್‌ ಅವರು ಶುಕ್ರವಾರ ಸೆಕ್ಟರ್ 22ರಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ತಲೆಗೆ ಗುಂಡೇಟು ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದರು.

ಅವರ ಮಗ ಅರ್ಮಾನ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಹಿಂದಿನ ದಿನವಾದ ಗುರುವಾರ ಅರ್ಮಾನ್ ಮತ್ತು ಆತನ ಪೋಷಕರ ನಡುವೆ ಜಗಳ ನಡೆದಿತ್ತು. ಅರ್ಮಾನ್ ತನ್ನ ಗೆಳತಿಯನ್ನು ಕೂಡಲೇ ಮದುವೆಯಾಗಲು ಬಯಸಿದ್ದ. ಆದರೆ, 21 ವರ್ಷ ವಯಸ್ಸು ಪೂರ್ಣಗೊಳ್ಳುವವರೆಗೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಪೋಷಕರು ಆತನಿಗೆ ತಿಳಿಸಿದ್ದರು.’ಗುರುವಾರ ಸಂಜೆ ಅರ್ಮಾನ್ ತನ್ನ ಪೋಷಕರೊಂದಿಗೆ ವಾಗ್ವಾದ ನಡೆಸಿದ್ದ. ಆತ ಒಬ್ಬ ಹುಡುಗಿಯನ್ನು ತಕ್ಷಣವೇ ಮದುವೆಯಾಗಲು ಬಯಸಿದ್ದ. ಆದರೆ, 21 ವರ್ಷ ವಯಸ್ಸು ಪೂರ್ಣಗೊಂಡ ಬಳಿಕವಷ್ಟೇ ಮದುವೆ ಮಾಡಬಹುದು ಎಂದು ಪೋಷಕರು ಪಟ್ಟು ಹಿಡಿದಿದ್ದರು’ ಎಂದು ಪೊಲೀಸ್‌ ಅಧಿಕಾರಿ ಸುದೇಶ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಅರ್ಮಾನ್ ಆ ಹುಡುಗಿಯನ್ನು ಮನೆಗೆ ಕರೆತರಲು ಕೂಡ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದ. ಆದರೆ, ಪೋಷಕರು ಅದಕ್ಕೆ ಒಪ್ಪಿರಲಿಲ್ಲ. ತನ್ನ ವಿವಿಧ ಅಗತ್ಯಗಳಿಗಾಗಿ ಪೋಷಕರಿಂದ ಹಣವನ್ನೂ ಆತ ಕೇಳುತ್ತಿದ್ದ. ಮದುವೆಗಾಗಿ ತಂದೆಯಿಂದ 10 ಲಕ್ಷ ರೂ. ಕೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಈ ವಾಗ್ವಾದದ ಮರುದಿನ ನಿತಿನ್ ಸಿಂಗ್ ತಮ್ಮ ಸರ್ಕಾರಿ ನಿವಾಸದಲ್ಲಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಘಟನಾ ಸ್ಥಳದಲ್ಲಿ ದೇಶಿ ನಿರ್ಮಿತ ಪಿಸ್ತೂಲ್ ಪತ್ತೆಯಾಗಿದೆ.ತಂದೆಯನ್ನು ಗುಂಡಿಕ್ಕಿದ ಬಳಿಕ ಅರ್ಮಾನ್ ತನ್ನ ತಾಯಿಯ ಕುತ್ತಿಗೆಯನ್ನು ಹಿಡಿದು ಹಲ್ಲೆ ಮಾಡಲು ಕೂಡ ಪ್ರಯತ್ನಿಸಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆದರೆ, ಅರ್ಮಾನ್ ನಿಂದ ತಪ್ಪಿಸಿಕೊಂಡ ಆಕೆ ಮನೆಯ ಮೇಲ್ಟಾವಣಿಗೆ ಓಡಿಹೋದರು. ಬಳಿಕ ನೆರೆಹೊರೆಯವರಿಗೆ ವಿಷಯ ತಿಳಿಸಿದರು.ತಂದೆಯ ಹತ್ಯೆಯ ನಂತರ, ಹೊರಗಿನಿಂದ ಯಾರೋ ಮನೆಗೆ ನುಗ್ಗಿ ತಂದೆಯನ್ನು ಕೊಂದಿದ್ದಾರೆ ಎಂಬಂತೆ ಬಿಂಬಿಸಲು ಅರ್ಮಾನ್ ಪ್ರಯತ್ನಿಸಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ.ಅರ್ಮಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಮಾಡಿದ ಕೃತ್ಯದ ಬಗ್ಗೆ ಆತ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ ಎಂದು ಪೊಲೀಸ್‌ ಅಧಿಕಾರಿ ಸುದೇಶ್‌ ಕುಮಾರ್ ತಿಳಿಸಿದ್ದಾರೆ.

ಅರ್ಮಾನ್ ಈ ವರ್ಷದ ಆರಂಭದಲ್ಲಿ ನಡೆದ ರಸ್ತೆ ಅಪಘಾತವೊಂದರ ಪ್ರಕರಣದಲ್ಲೂ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಮನಿಮಾಜ್ರಾದಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರಿಗೆ ಅರ್ಮಾನ್ ತನ್ನ ಸ್ನೇಹಿತನ ಮಹೀಂದ್ರಾ ಥಾರ್ ಕಾರನ್ನು ಡಿಕ್ಕಿ ಹೊಡೆದಿದ್ದ. ಅಪಘಾತದಲ್ಲಿ ಇಬ್ಬರೂ ಸಹೋದರರು ಮೃತಪಟ್ಟಿದ್ದರು.ಈ ಪ್ರಕರಣದಲ್ಲಿ ಅರ್ಮಾನ್ ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

- Advertisement -

Related news

error: Content is protected !!