
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ CJP ವಿದ್ಯಾರ್ಥಿ ಪ್ರತಿಭಟನೆ ಅಂತ್ಯಗೊಂಡಿದ್ದರೂ, ಅದಕ್ಕೆ ಸಂಬಂಧಿಸಿದ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿವೆ.ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ಪುತ್ರಿ ಅರ್ಚಿತಾ ಸಚಿನ್ ರಾಹರ್ ಅವರು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.



ವೈರಲ್ ಆಗಿರುವ ಪೋಸ್ಟ್‌ನಲ್ಲಿ, “ನನ್ನ ಕುಟುಂಬ ಧರ್ಮೇಂದ್ರ ಪ್ರಧಾನ್ ಅವರೊಂದಿಗಿದೆ. ಆದರೆ ನಾನು ವಿದ್ಯಾರ್ಥಿಗಳ ಪರವಾಗಿದ್ದೇನೆ” ಎಂದು ಬರೆಯಲಾಗಿದೆ ಎನ್ನಲಾಗಿದೆ. ಈ ಪೋಸ್ಟ್‌ನ್ನು ಎಕ್ಸ್ (X), ರೆಡ್ಡಿಟ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.ಇದರ ಬೆನ್ನಲ್ಲೇ, ಧರ್ಮೇಂದ್ರ ಪ್ರಧಾನ್ ಅವರ ತಂಡದ ಸದಸ್ಯರು ಅಪರಾಜಿತಾ ಸಾರಂಗಿ ಅವರನ್ನು ಸಂಪರ್ಕಿಸಿ, ಆ ಪೋಸ್ಟ್ ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ ಎಂಬ ಹೇಳಿಕೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಅಲ್ಲದೆ, ಪೋಸ್ಟ್ ಅಳಿಸುವ ಬದಲು ತಮ್ಮ ಮೇಲೆ ಬಂದಿದ್ದ ಒತ್ತಡದ ಕುರಿತು ಅರ್ಚಿತಾ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಈ ಬೆಳವಣಿಗೆಗಳ ನಡುವೆಯೇ ಅರ್ಚಿತಾ ಅವರ ಇನ್‌ಸ್ಟಾಗ್ರಾಂ ಖಾತೆ ಇದೀಗ ಲಭ್ಯವಿಲ್ಲ. ಖಾತೆಯನ್ನು ಅವರು ಸ್ವತಃ ನಿಷ್ಕ್ರಿಯಗೊಳಿಸಿದ್ದಾರೆಯೇ, ಅಳಿಸಿದ್ದಾರೆಯೇ ಅಥವಾ ಬೇರೆ ಕಾರಣದಿಂದ ಲಭ್ಯವಿಲ್ಲದಂತಾಗಿದೆಯೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.








