ಗುವಾಹಟಿ: ಸೇನಾ ಸಮವಸ್ತ್ರ ಧರಿಸಿದ್ದ 11 ಮಂದಿಯನ್ನು ಅಸ್ಸಾಂ ಪೊಲೀಸರು ಇಲ್ಲಿನ ವಿಮಾನ ನಿಲ್ದಾಣದ ಬಳಿ ಬುಧವಾರ ಬಂಧಿಸಿದ್ದಾರೆ.
ಕಾನೂನುಬಾಹಿರವಾಗಿ ಸೇನಾ ಸಮವಸ್ತ್ರ ಧರಿಸಿದ್ದಲ್ಲದೆ, ಸೂಕ್ತ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಗುವಾಹಟಿ ಲೋಕಪ್ರಿಯ ಗೋಪಿನಾಥ್ ಬೋರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಬಳಿ ಭಾರತೀಯ ಸೇನೆಯ ಯಾವುದೇ ಕಾನೂನುಬದ್ಧ ಹಾಗೂ ಸೂಕ್ತ ಗುರುತಿನ ಚೀಟಿ ಇರಲಿಲ್ಲ. ಅವರಲ್ಲಿ ಏನೋ ಸಂಚು ಇರುವಂತೆ ಕಾಣುತ್ತಿದೆ ಎಂದು ಗುವಾಹಟಿಯ ಪೊಲೀಸ್ ಜಂಟಿ ಆಯುಕ್ತ ದೇಬರಾಜ್ ಉಪಾಧ್ಯಾಯ ಹೇಳಿದ್ದಾರೆ.

ಈ 11 ಮಂದಿ ಕಳೆದ ಒಂದು ತಿಂಗಳಿಂದ ಈ ಪ್ರದೇಶದಲ್ಲಿ ನೆಲೆಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಬಂಧಿತರಲ್ಲಿ ದ್ರಿಮಾನ್ ಗೋಸ್ವಾಮಿ ಎಂಬಾತ ನಕಲಿ ನೇಮಕಾತಿ ಪತ್ರ ನೀಡಿದ್ದ. ಬಂಧಿತ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಅಲ್ಲಿ ಕೆಲವು ದಾಖಲೆಗಳು, ಗುರುತು ಪತ್ರಗಳು ಪತ್ತೆಯಾಗಿವೆ ಎಂದು ದೇಬರಾಜ್ ಉಪಾಧ್ಯಾಯ ತಿಳಿಸಿದ್ದಾರೆ.









