


ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಕೊಲೆಗಳ ಸರಮಾಲೆ ಮುಂದುವರಿದಿದ್ದು, ಪ್ರಮುಖ ಉದ್ಯಮಿ ಗೋಪಾಲ್ ಖೇಮ್ಕಾ ಅವರ ಹತ್ಯೆಯಾದ ಒಂದು ವಾರದೊಳಗೆ ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸುರೇಂದ್ರ ಕೆವಾತ್ (52) ಅವರನ್ನು ಶೇಕ್‌ಪುರ ಗ್ರಾಮದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಶನಿವಾರ (ಜುಲೈ 12, 2025) ರಾತ್ರಿ ಈ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಕೆವಾತ್‌ರ ಮೇಲೆ ನಾಲ್ಕು ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾರೆ.
ಗಾಯಗೊಂಡ ಬಿಜೆಪಿ ನಾಯಕ ಕೆವಾತ್‌ರನ್ನು ಪಾಟ್ನಾದ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ. ಈ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ.ಸುರೇಂದ್ರ ಕೆವಾತ್ಗೆ ಗುಂಡಿಕ್ಕಿ ಹತ್ಯೆ!ಸುರೇಂದ್ರ ಕೆವಾತ್, ಬಿಜೆಪಿ ಕಿಸಾನ್ ಮೋರ್ಚಾದ ಮಾಜಿ ನಾಯಕರಾಗಿದ್ದವರು, ಶೇಕ್‌ಪುರ ಗ್ರಾಮದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಯಾರೋ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸುರೇಂದ್ರ ಕೆವಾತ್‌ರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಗುಂಡಿನ ಸದ್ದು ಕೇಳಿ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಧಾವಿಸಿದಾಗ, ಕೆವಾತ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಾಯಗಳ ತೀವ್ರತೆಯಿಂದ ಅವರು ಮೃತಪಟ್ಟಿದ್ದಾರೆ.ಪಾಟ್ನಾದ ಪೊಲೀಸ್ ಅಧಿಕಾರಿ ಕನ್ಹಯ್ಯಾ ಸಿಂಗ್ ಪ್ರಕಾರ, “ಕೆವಾತ್‌ರ ಸಂಬಂಧಿಕರ ಹೇಳಿಕೆ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ. ಅದಾಗ್ಯೂ ಪಾಟ್ನಾದಲ್ಲಿ ನಡೆಯುತ್ತಿರುವ ಹತ್ಯೆಗಳ ಸರಣಿ ವಿರೋಧ ಪಕ್ಷದ ಟೀಕಿಗೆ ಗುರಿಯಾಗಿದೆ.
ಈ ಕೊಲೆಯು ಬಿಹಾರದ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ! ಎನ್‌ಡಿಎ ಸರ್ಕಾರದಲ್ಲಿ ಸತ್ಯವನ್ನು ಕೇಳಲು ಯಾರೂ ಇಲ್ಲ. ಮುಖ್ಯಮಂತ್ರಿಯ ಆರೋಗ್ಯದ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಇಬ್ಬರು ಬಿಜೆಪಿ ಉಪಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ?” ಎಂದು ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.








