




ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘದ ಕೇಂದ್ರ ಕಛೇರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ನಡೆಯಿತು.
2023-24ನೇ ಆರ್ಥಿಕ ವರ್ಷದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘವು ಅತ್ಯುತ್ತಮ ಕಾರ್ಯನಿರ್ವಹಣೆಯೊಂದಿಗೆ ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಗಣನೀಯ ಪ್ರಗತಿ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಂದ ಕೊಡಲ್ಪಡುವ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ಸತತ ಎಂಟನೇ ಬಾರಿಗೆ ಇಡ್ಕಿದು ಸೇವಾ ಸಹಕಾರಿ ಸಂಘವು ಆಯ್ಕೆಯಾಗಿದೆ.ಸತತ 17 ವರ್ಷಗಳಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿಯನ್ನು ಪಡಕೊಂಡ ಹೆಗ್ಗಳಿಕೆ ಇಡಿದು ಸೇವಾ ಸಹಕಾರಿ ಸಂಘದ್ದಾಗಿದೆ.
ಪ್ರಶಸ್ತಿ ಸಮಾರಂಭದಲ್ಲಿ ದ.ಕ ಜಿಲ್ಲಾ ಸಹಕಾರ ಸಂಘದ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್,ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್ ಪಿ ಜಯರಾಮ್ ರೈ, ರಾಜಾರಾಮ್ ಭಟ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.106 ವರ್ಷಗಳ ಇತಿಹಾಸವಿರುವ ಇದ್ದಿದು ಸೇವಾ ಸಹಕಾರಿ ಸಂಘವು 2 ಗ್ರಾಮ ವ್ಯಾಪ್ತಿಯಲ್ಲಿ ಉರಿಮಜಲಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದ್ದು ಮಿತ್ತೂರು, ಸೂರ್ಯ, ಕಬಕ ಅಡ್ಯಾಲುಕರೆ ಹಾಗೂ ಕುಂಡಡ್ಕದಲ್ಲಿ ಶಾಖೆಯನ್ನು ಹೊಂದಿದ್ದು ಎಲ್ಲವೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಳೆದ 2023-24ನೇ ಆರ್ಥಿಕ ವರ್ಷಕ್ಕೆ 4100 ‘ಎ’ ತರಗತಿ ಸದಸ್ಯರನ್ನು ಹೊಂದಿದೆ. 4.36ಕೋಟಿ ರೂ. ಪಾಲು ಬಂಡವಾಳವನ್ನು ಹೊಂದಿದ್ದು ರೂ.113ಕೋಟಿ ಠೇವಣಿ ಹಾಗೂ 75ಕೋಟಿ ರೂಪಾಯಿ ಸಾಲವನ್ನು ಹೊಂದಿದೆ. ವರದಿ ವರ್ಷದಲ್ಲಿ ಸುಮಾರು 450ಕೋಟಿ ವ್ಯವಹಾರವನ್ನು ಮಾಡಿ ಎಲ್ಲಾ ವಿಭಾಗದಲ್ಲಿಯೂ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದೆ.ಸಹಕಾರ ಕ್ಷೇತ್ರದ ಇತಿಹಾಸದಲ್ಲಿ ರಾಜ್ಯದಲ್ಲೇ ಪ್ರಥಮ ಭಾರಿಗೆ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ತೆರೆದ ಸಹಕಾರಿ ಸಂಘ ಇದಾಗಿದೆ. ಸಂಘವು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸರ್ವಋತು ರಸ್ತೆ ಸಹಕಾರಿ ಪಥ ನಿರ್ಮಾಣ ಮಾಡಿದೆ. ಸಂಘವು ಇಡ್ಕಿದು ಮತ್ತು ಕುಳ ಗ್ರಾಮದಲ್ಲಿ ಗ್ರಾಮಾಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಸ್ವಸ್ಥ-ಸಂಮೃದ್ಧ-ಸಂತೃಪ್ತ ಗ್ರಾಮ ನಿರ್ಮಾಣದಲ್ಲಿ ಸಹಕಾರಿ ಸಂಘವು ಪ್ರಮುಖ ಪಾತ್ರ ವಹಿಸಿದೆ.
ಆಡಳಿತ ಮಂಡಳಿ: ಸಂಘದ ಪ್ರಸ್ತುತ ಅಧ್ಯಕ್ಷರಾಗಿ ಸುಧಾಕರ್ ಶೆಟ್ಟಿ ಬೀಡಿನಮಜಲು, ಉಪಾಧ್ಯಕ್ಷರಾಗಿ ರಾಮ ಭಟ್ ನೀರಪಳಿಕೆ, ನಿರ್ದೇಶಕರಾಗಿ ಚಂದ್ರಹಾಸ ಕೆಂರ್ದೇಲು, ಜಯಂತ ಕಂಪ, ನವೀನ್ ಕೆ.ಪಿ.ಪಾಂಡೇಲು, ಉಮೇಶ್ ವಡ್ಯರ್ಪೆ, ಲೋಹಿತಾಶ್ವ ಎಂ ಮುಡ್ರಬೈಲು, ಸತೀಶಕೆ ಅಳಕೆಮಜಲು, ಆನಂದ ಅಡ್ಯಾಲು, ಹೃಷಿಕೇಶ್ ಕೆ ಎಸ್ ಮುಕ್ಕುಡ, ಪದ್ಮಾವತಿ ಕೂವೆತ್ತಿಲ, ವಿದ್ಯಾ ವಿ ಮೊದಲೆಗುಂಡಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ವಲಯ ಮೇಲ್ವಿಚಾರಕರಾಗಿ ಯೋಗೀಶ್ ಎಚ್ . ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾಗಿ ರವೀಂದ್ರನಾಥ ಮೇಲಾಂಟ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
*ಪ್ರಶಸ್ತಿಯು ಸಂಘದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ*ಸಂಘಕ್ಕೆ ಪ್ರಶಸ್ತಿ ಲಭಿಸಿರುವುದು ಬಹಳ ಸಂತಸ ತಂದಿದೆ. ಸರ್ವ ಸದಸ್ಯರ ಸಲಹೆ ಸಹಕಾರದಿಂದ ಲಭಿಸಿರುವ ಈ ಪ್ರಶಸ್ತಿ ಸಂಘದ ಅಭಿವೃದ್ಧಿಗಾಗಿ ಇನ್ನಷ್ಟು ಶ್ರಮಿಸಲು ಸ್ಫೂರ್ತಿಯಾಗಿದೆ. ಸಂಘವು ಕೇವಲ 2 ಗ್ರಾಮ ವ್ಯಾಪ್ತಿಯನ್ನು ಹೊಂದಿದ್ದರೂ ಬ್ಯಾಂಕಿಂಗ್ ಮತ್ತು ಎಲ್ಲಾ ವಿಭಾಗದಲ್ಲೂ ವರ್ಷದಿಂದ ವರ್ಷಕ್ಕೆ ದಾಖಲೆಯ ಸಾಧನೆಯನ್ನು ಮಾಡುತ್ತಾ ಬಂದಿದೆ. ಈ ಪ್ರಶಸ್ತಿಗೆ ಕಾರಣಕರ್ತರಾದ ನಮ್ಮ ಸಂಘದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರಿಗೆ, ಸಹಕಾರಿ ಸಂಘದ ಎಲ್ಲಾ ಸದಸ್ಯರಿಗೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಆಭಾರಿಯಾಗಿದ್ದೇವೆ ಎಂದು ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು ಹೇಳಿದರು.
*ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ*ಸಂಘದ ಆಡಳಿತ ಮಂಡಳಿಯ ಸಹಕಾರ ಹಾಗೂ ಸದಸ್ಯರ-ಗ್ರಾಹಕರ ಸಹಕಾರ ಮತ್ತು ಸಿಬ್ಬಂದಿಗಳ ಪ್ರಾಮಾಣಿಕ ಕರ್ತವ್ಯ ನಿಷ್ಠೆಯಿಂದ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮತ್ತು ಸಹಕಾರಿ ಇಲಾಖಾಧಿಕಾರಿಗಳ ಮಾರ್ಗದರ್ಶದಲ್ಲಿ ಸಂಘವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಈ ಸಂದರ್ಭದಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕಿನಿಂದ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೇಲಾಂಟ ಹೇಳಿದರು.








