
ಪುತ್ತೂರು: ಪುತ್ತೂರಿನ ದೇವರಮಾರು ಗದ್ದೆ ಈಗ ಕಲ್ಯಾಣ ಮಂಟಪವಾಗಿ ಬದಲಾಗಿದೆ. ನವೆಂಬರ್ 29 ಮತ್ತು 30 ರಂದು ಇಲ್ಲಿ ನಡೆಯಲಿದೆ 3ನೇ ವರ್ಷದ ‘ಶ್ರೀನಿವಾಸ ಕಲ್ಯಾಣೋತ್ಸವ’ದ ಜೊತೆಗೆ, ‘ಹಿಂದವಿ ಸಾಮ್ರಾಜ್ಯೋತ್ಸವ ಸಂಘದ 100 ವರ್ಷದ ಸಂಭ್ರಮಕ್ಕಾಗಿ ಸಾಮೂಹಿಕ ವಿವಾಹ ಆಯೋಜನೆ ಮಾಡಲಾಗಿದೆ. ಸಮಿತಿಯ ಸಂಚಾಲಕ, ಹಾಗೂ ಪುತ್ತಿಲ ಪರಿವಾರದ ನೇತಾರ ಅರುಣ್ ಕುಮಾರ್ ಪುತ್ತಿಲ ಸಾರಥ್ಯದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಬರೋಬ್ಬರಿ 60 ಸಾವಿರ ಚದರ ಅಡಿಯ ಬೃಹತ್ ಸಭಾಂಗಣ, 100 ಅಡಿ ಉದ್ದ, 140 ಅಡಿ ಅಗಲದ ವೇದಿಕೆ ನಿರ್ಮಾಣವಾಗುತ್ತಿದೆ.

ನ. 30 ರಂದು ಬೆಳಗ್ಗೆ 10.30ರ ಮಕರ ಲಗ್ನದಲ್ಲಿ ಹಲವು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಲ್ಲಿ ಸುಮ್ಮನೆ ಹೆಸರಿಗೆ ಮದುವೆ ಮಾಡುತ್ತಿಲ್ಲ , ಪ್ರತಿ ಜೋಡಿಗೂ ಬರೋಬ್ಬರಿ 50 ಸಾವಿರ ಮೌಲ್ಯದ ಚಿನ್ನದ ತಾಳಿ, ಕರಿಮಣಿ, ಬಟ್ಟೆ ಸೇರಿ ಒಟ್ಟು 75 ಸಾವಿರ ರೂಪಾಯಿ ವೆಚ್ಚವನ್ನು ಟ್ರಸ್ಟ್ ಭರಿಸಲಿದೆ. ಆರಂಭದಲ್ಲಿ 113 ಜೋಡಿಗಳು ಅರ್ಜಿ ಹಾಕಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅರ್ಹ 16 ಜೋಡಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ 10 ಜೋಡಿಗಳ ದಾಖಲೆಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಅದಕ್ಕೂ ಕೂಡ ಇಲಾಖೆಯ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿ ಸಮಿತಿಯಿದೆ. ಅಷ್ಟೇ ಅಲ್ಲ. ಪ್ರತಿ ವಧು ವರರಿಗೆ ಪ್ರತ್ಯೇಕ ಶೃಂಗಾರ ಮಂಟಪ, ವೈದಿಕರ ವ್ಯವಸ್ಥೆ ಕೂಡ ಮಾಡಲಾಗಿದೆ. ಅಂದು ಬೆಳಿಗ್ಗೆ 8.30ಕ್ಕೆ ಪುತ್ತಿಲ ಪರಿವಾರ ಟ್ರಸ್ಟ್ ಕಚೇರಿಯಿಂದ ದಿಬ್ಬಣ ಹೊರಡಲಿದೆ.

ನ.28 (ಹೊರೆಕಾಣಿಕೆ): ಸಂಜೆ 4 ಗಂಟೆಗೆ ದರ್ಬೆಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ದೇವಸ್ಥಾನದ ಉಗ್ರಾಣಕ್ಕೆ ಸಮರ್ಪಣೆಯಾಗಲಿದೆ.
ನ.29 (ಸಾಮ್ರಾಜ್ಯೋತ್ಸವ): ಬೆಳಿಗ್ಗೆ ಗಣಪತಿ ಹೋಮ, ಭಜನೆ ನಡೆಯಲಿದೆ. ಸಂಜೆ, ಗಂಟೆಗೆ ಬೊಳುವಾರಿನಿಂದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರ ವೈಭವದ ಶೋಭಯಾತ್ರೆ ನಡೆಯಲಿದೆ. ಸಂಜೆ 7.30ಕ್ಕೆ ಸಾಧುಸಂತರ ಉಪಸ್ಥಿತಿಯಲ್ಲಿ ‘ಹಿಂದವಿ ಸಾಮ್ರಾಜ್ಯೋತ್ಸವ ಜರಗಲಿದೆ.
ನ.30 (ಕಲ್ಯಾಣೋತ್ಸವ): ಬೆಳಿಗ್ಗೆ 10.30ಕ್ಕೆ ಸಾಮೂಹಿಕ ವಿವಾಹ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ, ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮಕ್ಕೆ ಉಡುಪಿಯ ಪೇಜಾವರ ಶ್ರೀಗಳು, ಗೋಕರ್ಣದ ರಾಘವೇಶ್ವರ ಶ್ರೀಗಳು, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರು, ಎಡನೀರು ಶ್ರೀಗಳು ಸೇರಿದಂತೆ ರಾಜ್ಯದ ಮೂಲೆಮೂಲೆಯಿಂದ ಮಠಾಧೀಶರು ಪುತ್ತೂರಿಗೆ ಆಗಮಿಸಲಿದ್ದಾರೆ.

ಕಾರ್ಯಕ್ರಮದ ಪೂರ್ವಭಾವಿಯಾಗಿ ಕ್ರೇನ್ ಮೂಲಕ ಭಗವಾಧ್ವಜವನ್ನು ಹಾರಿಸಲಾಗಿದೆ. ಸಂಘ ಪರಿವಾರದ ಹಿರಿಯರಿಗೂ ಆಹ್ವಾನ ಹೋಗಿದೆ. ಅನ್ನಸಂತರ್ಪಣೆಗೆ 25 ಸಾವಿರ ಚದರ ಅಡಿ ಜಾಗ ರೆಡಿಯಾಗಿದೆ. ಪುತ್ತೂರಿನಲ್ಲಿ ನಡೆಯುವ ಈ ವೈಭವದ ಕಲ್ಯಾಣೋತ್ಸವ ಕಾರ್ಯಕ್ರಮದ ಬಗ್ಗೆ ಸಂಚಾಲಕ ಅರುಣ್ ಪುತ್ತಿಲರವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದು ರಾಜಕೀಯ ರಹಿತ ಕಾರ್ಯಕ್ರಮವಾಗಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಸಮಿತಿ ಅಧ್ಯಕ್ಷ ವಕೀಲ ನರಸಿಂಹ ಪ್ರಸಾದ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಶ್ರೀರಾಮ ಭಟ್ ಪಾತಾಳ, ಪ್ರೇಮ್ರಾಜ್, ಉಮೇಶ್ ಕೋಡಿಬೈಲ್ ಮತ್ತು ರವಿ ಕುಮಾರ್ ರೈ ಉಪಸ್ಥಿತರಿದ್ದರು.








