Wednesday, July 22, 2026
spot_imgspot_img
spot_imgspot_img

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ಫೇಸ್‌ ಬುಕ್‌ ಪೋಸ್ಟ್-‌ ಬಿಜೆಪಿ ನಾಯಕರ ತೀವ್ರ ಆಕ್ರೋಶ – ದೂರು ದಾಖಲು

- Advertisement -
- Advertisement -

ಮಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಬಿಜೆಪಿ ದಲಿತ ನಾಯಕಿ ಭಾಗೀರಥಿ ಮುರಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಹರೀಶ್ ಪೂಂಜ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


‘ಬಿಲ್ಲವ ಸಂದೇಶ್’ (Billava Sandesh) ಎಂಬ ಹೆಸರಿನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ವ್ಯಕ್ತಿಯೊಬ್ಬರು ಶಾಸಕಿ ಭಾಗೀರಥಿ ಮುರಳ್ಯ ಅವರ ಕುರಿತು ಅವಹೇಳನಕಾರಿ ಬರಹವನ್ನು ಪೋಸ್ಟ್ ಮಾಡಿದ್ದು, ಮಹಿಳಾ ಜನಪ್ರತಿನಿಧಿಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಈ ಪೋಸ್ಟ್ ಮಾಡಲಾಗಿದೆ ಎಂದು ಹರೀಶ್ ಪೂಂಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಧ್ಯ ಈ ಪೋಸ್ಟ್ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹರೀಶ್ ಪೂಂಜ, “ಅಸಭ್ಯ ಭಾಷೆ ಬಳಸಿ ಮಹಿಳಾ ಶಾಸಕರ ವಿರುದ್ಧ ಅವಹೇಳನ ನಡೆಸಿರುವುದು ಖಂಡನೀಯ. ಇದು ಕೇವಲ ದಲಿತ ಸಮುದಾಯವನ್ನಷ್ಟೇ ಅಲ್ಲ, ಸಮಸ್ತ ಮಹಿಳೆಯರ ಗೌರವಕ್ಕೂ ಧಕ್ಕೆ ತರುವ ಕೃತ್ಯ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.


“ಅಸಭ್ಯ ಭಾಷೆಗಳ ಮೂಲಕ ಬೆದರಿಕೆ ಹಾಕುವ ಇಂತಹ ದುರುಳರು ನಾಗರಿಕ ಸಮಾಜಕ್ಕೆ ಕಳಂಕ. ಇದು ಕೇವಲ ದಲಿತ ಸಮುದಾಯದ ಸಹೋದರಿಗೆ ಮಾಡಿದ ಅವಮಾನವಲ್ಲ, ಬದಲಿಗೆ ಈ ದೇಶದ ಮಹಿಳೆಯೊಬ್ಬರ ಘನತೆ ಹಾಗೂ ಗೌರವದ ಮೇಲಿನ ನೇರ ದಾಳಿಯಾಗಿದೆ” ಎಂದು ನಾಯಕರು ಕಿಡಿಕಾರಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಅವರು, ಇಂತಹ ವಿಕೃತ ಮನಸ್ಥಿತಿಯ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ಈ ಕೃತ್ಯವನ್ನು ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಒಕ್ಕೊರಲಿನಿಂದ ಖಂಡಿಸಿದ್ದಾರೆ. ಆಕ್ಷೇಪಾರ್ಹ ಪೋಸ್ಟ್ ಸ್ಕಿನ್ಯಾಟ್ ಅನ್ನು ಟ್ಯಾಗ್ ಮಾಡಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಾಸಕರಾದ ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ದೂರು ದಾಖಲು
ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ, ಅವಹೇಳನಕಾರಿ ಪೋಸ್ಟ್‌ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾವೂರು ಗ್ರಾಮದ ಸುಲ್ತಾನಕಟ್ಟೆ ನಿವಾಸಿ ಸಂದೇಶ್ ಯಾನೆ ಸೀತಾರಾಮ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಹೆಸರಿಸಲಾಗಿದೆ.

ದಿನಾಂಕ 07-01-2026 ರಂದು ಸದಾನಂದ ಬಂಟ್ವಾಳ ತಾಲೂಕು ರವರು ತನ್ನ ಮೊಬೈಲ್‌ನ ಫೇಸ್ ಬುಕ್ ಖಾತೆಯನ್ನು ಗಮನಿಸಿದಾಗ Billava Sandesh ಎಂಬ ಫೇಸ್ ಬುಕ್ ಖಾತೆಯಲ್ಲಿ ಸುಳ್ಯ ವಿಧಾನ ಸಭಾ ಶಾಸಕಿಯವರ ಫೋಟೊ ಜೊತೆ ಅವಹೇಳನ ರೀತಿಯಲ್ಲಿ ಬರಹಗಳನ್ನು ಹಾಕಿ, ಸುಳ್ಳು ಅಪಪ್ರಚಾರವನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಮಾಡಿರುವುದಾಗಿ ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ. ಈ ಹೇಳಿಕೆಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!