


ಪುತ್ತೂರು: ಕಾರು ವ್ಯವಹಾರ ಸಂಬಂಧ ನಡೆದ ಮಾತುಕತೆ ವೇಳೆ ಉಂಟಾದ ಗಲಾಟೆಯಲ್ಲಿ ಯುವಕನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಕೆದಿಲ ಗ್ರಾಮದ ಸತ್ತಿಕಲ್ಲು ಪೆಟ್ರೋಲ್ ಪಂಪ್ ಸಮೀಪ ನಡೆದಿದೆ.

ಕೆದಿಲ ಗ್ರಾಮದ ಸರೋಳಿ ನಿವಾಸಿ ಅಬೂಬಕ್ಕರ್ ರಾಶೀಕ್ (28) ಗಾಯಗೊಂಡವರಾಗಿದ್ದಾರೆ. ಬೆಂಗಳೂರು ಮೂಲದ ಶ್ರೀರಾಮ ಫೈನಾನ್ಸ್ ಸ್ವಾಧೀನಪಡಿಸಿಕೊಂಡಿದ್ದ ಇನ್ನೋವಾ ಕಾರನ್ನು ರಾಶೀಕ್ ಅವರಿಗೆ ಮಾರಾಟ ಮಾಡಲಾಗಿತ್ತು. ಈ ಕಾರನ್ನು ಮರುಖರೀದಿಸುವ ಉದ್ದೇಶದಿಂದ ಮೂಲ ಮಾಲಕ ಸೂರಜ್ ತನ್ನ 7–8 ಮಂದಿ ಸ್ನೇಹಿತರೊಂದಿಗೆ ರಾಶೀಕ್ ಅವರನ್ನು ಸತ್ತಿಕಲ್ಲು ಪೆಟ್ರೋಲ್ ಪಂಪ್ ಬಳಿ ಭೇಟಿ ಮಾಡಿದ್ದರೆಂದು ತಿಳಿದುಬಂದಿದೆ.
ಮಾತುಕತೆ ವೇಳೆ ಕಾರಿನ ಕೀಯನ್ನು ಬಲವಂತವಾಗಿ ಕಸಿಯಲು ಯತ್ನಿಸಿದಾಗ ರಾಶೀಕ್ ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಸೂರಜ್ ಹಾಗೂ ಅವರ ಜೊತೆಗಿದ್ದವರು ಸೇರಿ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲ್ಲೆಯಿಂದ ಗಾಯಗೊಂಡ ರಾಶೀಕ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








