ಮಂಗಳೂರು: ವೇಣೂರು ಪೊಲೀಸ್ ಠಾಣಾ ಅ.ಕ್ರ. 15/2021ಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಗಳೂರು (ಸ್ಪೆಷಲ್ ಕೇಸ್ ನಂ.104/2021) ತೀರ್ಪು ಪ್ರಕಟಿಸಿದೆ.

ಆರೋಪಿ ಬೆಳ್ತಂಗಡಿ ತಾಲೂಕಿನ ಖಾಲಿದ್ ಎಂಬಾತನಿಗೆ ದಿನಾಂಕ 26ರಂದು ಮಾನ್ಯ ನ್ಯಾಯಾಲಯವು ಕಲಂ 452, 354(A) ಐಪಿಸಿ ಹಾಗೂ ಎಸ್ಸಿ/ಎಸ್ಟಿ ಕಾಯ್ದೆ 1989ರ ಕಲಂ 3(1)(W), 3(2)(VA) ಅನ್ವಯ 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ ₹25,000 ದಂಡ ವಿಧಿಸಿದೆ.
ಪ್ರಕರಣದ ಸಂಕ್ಷಿಪ್ತ ವಿವರ:
ದೂರುದಾರರಾದ ವಿಶ್ವನಾಥ್ ಅವರು ಪರಿಶಿಷ್ಟ ಜಾತಿಯ ನಲಿಕೆ ಸಮುದಾಯಕ್ಕೆ ಸೇರಿದ್ದು, ಅವರ ತಂಗಿ ಸುಗಂಧಿ ಬೌದ್ಧಿಕ ಅಂಗವೈಕಲ್ಯ ಹೊಂದಿದ್ದು ಮನೆಯಲ್ಲಿ ವಾಸವಾಗಿದ್ದಳು. ದಿನಾಂಕ 28-02-2021 ರಂದು ಬೆಳಿಗ್ಗೆ ಕುಟುಂಬದವರು ಅಳದಂಗಡಿಯಲ್ಲಿ ಭೂತಕೋಲ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ, ಬೆಳಗ್ಗೆ ಸುಮಾರು 11.00 ಗಂಟೆಗೆ ಮನೆಯಲ್ಲಿ ಸಂತ್ರಸ್ಥೆ ಒಬ್ಬಳೇ ಇದ್ದ ಸಂದರ್ಭ, ನೆರೆಮನೆಯ ಖಾಲಿದ್ ಮನೆಗೆ ಪ್ರವೇಶಿಸಿ ಆಕೆಯ ಕೈ ಹಿಡಿದು “ನೀನು ನನ್ನೊಂದಿಗೆ ಬಾ” ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿ, ಮಾನಭಂಗಕ್ಕೆ ಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ 448, 354, 354(A), 506 ಐಪಿಸಿ ಹಾಗೂ ಎಸ್ಸಿ/ಎಸ್ಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿತ್ತು.
ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ:
ಪ್ರಕರಣದ ಸಂಪೂರ್ಣ ತನಿಖೆಯನ್ನು ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವ್ಯಾಲೆಂಟೈನ್ ಡಿ’ಸೋಜಾ ಅವರು ನಡೆಸಿ, ತನಿಖಾ ಸಹಾಯಕರಾಗಿ ಎಎಸ್ಐ ಸೀತಾರಾಮ ಗೌಡ ಕೆ. ಸಹಕರಿಸಿದ್ದಾರೆ.
ಪ್ರಕರಣವನ್ನು ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಮಾನಿಟರಿಂಗ್ ಮಾಡಿದ್ದು, ಸಮನ್ಸ್ ಜಾರಿಗೆ ಪಿಸಿ 2466 ಬಸವರಾಜ್ ಎಸ್.ಪಿ ಕಾರ್ಯನಿರ್ವಹಿಸಿದ್ದಾರೆ. ಸಾಕ್ಷಿದಾರರನ್ನು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಕಾರ್ಯವನ್ನು ಮಪಿಸಿ 2424ನೇ ಕಾಳವ್ವ ಅವರು ಸಮರ್ಪಕವಾಗಿ ನಿರ್ವಹಿಸಿ, ಪೂರಕ ಸಾಕ್ಷ್ಯ ನೀಡುವಲ್ಲಿ ಸಹಕರಿಸಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ನಾಯ್ಕ್ ಅವರು ವಾದ ಮಂಡಿಸಿದ್ದು, ಮಾನ್ಯ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಅಂತಿಮ ತೀರ್ಪು ಪ್ರಕಟಿಸಿದ್ದಾರೆ.








