




ತುಮಕೂರು: ಆತ್ಮಹತ್ಯೆ ಮಾಡಿಕೊಂಡಿದ್ದ ಮಗಳ ಮೃತದೇಹವನ್ನು ಅಳಿಯನ ಮನೆಯ ಹಾಲ್ ನಲ್ಲಿಯೇ ತಂದೆಯೊಬ್ಬ ಹೂತಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಪಾವಗಡ ಮೂಲದ ಶೃತಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶೃತಿ ಮೃತದೇಹವನ್ನು ಪಾವಗಡದಲ್ಲಿರುವ ಆಕೆಯ ಪತಿ ಪವನ್ ಕಲ್ಯಾಣ್ ನ ನಿರ್ಮಾಣ ಹಂತದ ಮನೆಗೆ ತರಲಾಗಿತ್ತು. ಅಳಿಯ ಮನೆ ಕಟ್ಟಲು ನಾನೇ ಹಣ ಕೊಟ್ಟಿದ್ದೆ. ಅವಳ ನೆನಪಿಗಾಗಿ ಇಲ್ಲೇ ಅವಳ ಸಮಾಧಿ ಮಾಡಿ ಸ್ಮಾರಕ ಮಾಡುತ್ತೇನೆಂದು-ಶೃತಿ ತಂದೆ ರಾಜು ನಾಯ್ಕ ಹಠ ಹಿಡಿದಿದ್ದಾರೆ ಎನ್ನಲಾಗಿದೆ.
ನಡುಮನೆಯಲ್ಲಿ ಹೊಸದಾಗಿ ಹಾಕಲಾಗಿದ್ದ ಟೈಲ್ಸ್ ಕಲ್ಲುಗಳನ್ನು ಕತ್ತರಿಸಿ ಗುಂಡಿ ತೋಡಿ ಶೃತಿ ಶವ ಹೂತಿದ್ದು, ಈ ವಿಚಾರ ಗೊತ್ತಾಗಿ ಸ್ಥಳಕ್ಕೆ ಬಂದ ಪೊಲೀಸರು ರಾಜು ನಾಯ್ಕರ ಮನವೊಲಿಸಲು ಹರಸಾಹಸಪಟ್ಟು, ಕೊನೆಗೆ ಮನೆಯೊಳಗೆ ಶವ ಹೊರತೆಗೆಯಲು ಅವರು ಒಪ್ಪಿದ್ದಾರೆ.
ಬಳಿಕ ಪವನ್ ಕಲ್ಯಾಣ್‌ಗೆ ಸೇರಿದ ಜಮೀನಿನಲ್ಲಿ ಶೃತಿಯ ಅಂತ್ಯಸಂಸ್ಕಾರ ಮಾಡಲಾಯಿತು. ಮಗಳ ಮೇಲಿನ ಪ್ರೀತಿ ಹಾಗೂ ಅಳಿಯನ ಮೇಲಿನ ಆಕ್ರೋಶದಿಂದ ತಂದೆ ಈ ಕೃತ್ಯ ಎಸಗಿರಬಹುದು ಎಂದು ವರದಿಯಿಂದ ತಿಳಿದುಬಂದಿದೆ.








