ಹೊಸದಿಲ್ಲಿ: ಈದ್ ದಿನದಂದು ರಾಪಿಡೋ ಚಾಲಕನೊಬ್ಬ ಮುಸ್ಲಿಂ ಪ್ರಯಾಣಿಕನನ್ನು ತನ್ನ ವಾಹನದಲ್ಲಿ ಕರೆದೊಯ್ಯಲು ನಿರಾಕರಿಸಿರುವ ಆರೋಪ ಕೇಳಿ ಬಂದಿದೆ.

ದಿಲ್ಲಿಯಲ್ಲಿ ನೆಲೆಸಿರುವ ಕೇರಳ ಮೂಲದ ಪತ್ರಕರ್ತ ಝೈನ್ ಎಂಬವರು ಸುಭಾಷ್ ರಾವತ್ ಅವರ ಕ್ಯಾಬ್ ಅನ್ನು ಬುಕ್ ಮಾಡಿದ್ದರು. ಝೈನ್ ಮುಸ್ಲಿಂ ಎಂದು ತಿಳಿದ ನಂತರ, ಚಾಲಕನು ಅವರನ್ನು ಕರೆದೊಯ್ಯಲು ನಿರಾಕರಿಸಿದ್ದಾನೆ ಎಂದು ವರದಿಯಾಗಿದೆ.ನನ್ನನ್ನು ಕರೆದೊಯ್ಯುವುದಿಲ್ಲ ಎಂದು ನೀವು ಯಾಕೆ ಹೇಳುತ್ತಿದ್ದೀರಿ? ನಾನು ಮುಸ್ಲಿಂ ಆಗಿದ್ದರಿಂದನಾ? ಎಂದು ಝೈನ್ ಈ ವೇಳೆ ರಾಪಿಡೋ ಚಾಲಕನಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾವತ್, “ಹೌದು, ನನ್ನ ವಾಹನದಲ್ಲಿ ಮುಸ್ಲಿಮರಿಗೆ ಪ್ರವೇಶವಿಲ್ಲ. ಇದು ನಿಮ್ಮ ತಂದೆಯ ವಾಹನವಲ್ಲ” ಎಂದು ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
ಝೈನ್ ಕರೆಯನ್ನು ರೆಕಾರ್ಡ್ ಮಾಡಿ ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಡಿಯೊ ವೈರಲ್ ಬೆನ್ನಲ್ಲೆ ಚಾಲಕನ ವಿರುದ್ಧ ಕ್ರಮಕ್ಕೆ ವ್ಯಾಪಕ ಆಗ್ರಹ ವ್ಯಕ್ತವಾಗಿದೆ.
ಘಟನೆ ಬಗ್ಗೆ ರಾಪಿಡೋ ಕಂಪೆನಿಯು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ಈ ರೀತಿಯ ನಡವಳಿಕೆಯನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.








