Tuesday, July 21, 2026
spot_imgspot_img
spot_imgspot_img

ಧರ್ಮದ ದಿಕ್ಕು ತೋರಿದ ದಾರ್ಶನಿಕ: ಶ್ರೀ ಶಂಕರಾಚಾರ್ಯರು

- Advertisement -
- Advertisement -

ಧರ್ಮ ನೇಪಥ್ಯಕ್ಕೆ ಸರಿಯುವ ಸಂಧ್ಯಾಕಾಲದಲ್ಲಿ ಅವತರಿಸಿ ಮತ್ತೆ ಧರ್ಮವನ್ನು ಸ್ಥಾಪಿಸಿದ ಶ್ರೀ ಶಂಕರಾಚಾರ್ಯರು ಭಕ್ತಿ ಮತ್ತು ಜ್ಞಾನ ಮಾರ್ಗಗಳ ಸಮನ್ವಯತೆ ಸಾಧಿಸಿದ ಅವತಾರ ಪುರುಷ.ಈಗಿನ ಕೇರಳದ ಪೂರ್ಣಾ ನದಿ ಹರಿಯುತ್ತಿದ್ದ ಸಸಲಂ(ಕಾಲಟಿ) ಎಂಬ ಸ್ಥಳದಲ್ಲಿ ವಾಸವಾಗಿದ್ದ ಶ್ರೀ ಕಾಯ್‌ಪಿಳ್ಳೆ ಶಿವಗುರು ನಂಬೂದಿರಿ ಮತ್ತು ಶೀಮತಿ ಆರ್ಯಾಂಬಾ ಎಂಬ ದಂಪತಿಗಳು ಅನೇಕ ವರ್ಷ ಮಕ್ಕಳಾಗದಿದ್ದುದರಿಂದ ತ್ರಿಶೂರಿನ ವಡಕ್ಕನಾಥನ ಪ್ರಾರ್ಥನೆ ಮಾಡಿಕೊಂಡ ಫಲವಾಗಿ ಶ್ರೀ ಶಂಕರರು ಕೇರಳದ ಕಾಲಡಿ ಎಂಬ ಊರಿನಲ್ಲಿ ಕ್ರಿ.ಶ. 788 ರಲ್ಲಿ ವೈಶಾಖ ಶುದ್ಧ ಪಂಚಮಿಯಂದು ಜನಿಸಿದರು.ಇವರು ಚಿಕ್ಕ ವಯಸ್ಸಿನಲ್ಲಿಯೇ ತಂದೆಯವರನ್ನು ಕಳೆದುಕೊಂಡ ಪರಿಣಾಮ ಐದು ವರ್ಷದವರಿದ್ದಾಗಲೇ ತಾಯಿ ಆರ್ಯಾಂಬಾ ಉಪನಯನವನ್ನು ಮಾಡಿದರು. ಆ ವಯಸ್ಸಿನಲ್ಲಿಯೇ ಅಸಾಧಾರಣ ಮೇಧಾವಿಯಾದ ಇವರು ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನೂ ಕಲಿತು ಕರಗತ ಮಾಡಿಕೊಂಡು ಶಾಸ್ತ್ರ ಮತ್ತು ಪುರಾಣಗಳನ್ನು ಆಭ್ಯಾಸ ಮಾಡಿ ಕೇವಲ ಹನ್ನೆರಡನೇ ವರ್ಷಕ್ಕೆ ಸಕಲ ಶಾಸ್ತ್ರ ಪಾರಂಗತರಾದರು.

ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಇವರು ಅನೇಕರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿ ಸನಾತನ ಧರ್ಮವನ್ನು ಎತ್ತಿ ಹಿಡಿದರು. ಹೀಗೆ ಅದ್ವೈತ ತತ್ತ್ವವನ್ನು ಅಲ್ಪಾವಧಿಯಲ್ಲೇ ಪ್ರಚುರಪಡಿಸಿ ಜನಪ್ರಿಯಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಕಲವೂ ಪರಬ್ರಹ್ಮವೇ ಎಂದು ಒತ್ತಿ ಹೇಳುವ ಮೂಲಕ ಬೇಧ ಬುದ್ಧಿ ಸಲ್ಲದು, ತಾರತಮ್ಯ ಕೂಡದು ಎಂದು ಇವರು ಪ್ರತಿಪಾದಿಸಿದರು. ಕೇವಲ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ಭರತ ಖಂಡದ ಉದ್ದಗಲ ಸಂಚರಿಸಿ ಅದ್ವೈತ ಮತ ಪ್ರಚಾರ ನಡೆಸಿದ ಇವರು ನೂರಾರು ಗ್ರಂಥಗಳನ್ನೂ ರಚಿಸಿದ್ದಾರೆ

.ಸನಾತನ ಧರ್ಮದ ಉಳಿವಿಗಾಗಿ ಮತ್ತು ಪುನರುತ್ಥಾನಕ್ಕಾಗಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಶಕ್ತಿ ಪೀಠ(ಮಠ)ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿ ಅದ್ವೈತ ಸಿದ್ಧಾಂತವನ್ನು ಜನಪ್ರಿಯಗೊಳಿಸಿದರು.“ಸೃಷ್ಟಿಯಲ್ಲಿನ ಜಡ ಚೇತನಗಳೆಲ್ಲವೂ ಒಂದೇ; ಅದು ಪರಬ್ರಹ್ಮ” ಎಂದು ಸಾರಿದ ಇವರು ತರತಮವಿಲ್ಲದ ಅಧ್ಯಾತ್ಮ ಚಿಂತನೆಗೆ ದಾರಿ ಹಾಕಿಕೊಟ್ಟರು. ಇವರು ಪ್ರತಿಪಾದಿಸಿದ ಅದ್ವೈತ ಚಿಂತನೆಯನ್ನು ಅವು ಇರುವಂತೆಯೇ ಬಳಸಿಕೊಂಡರೆ ಜೀವಿಗಳೆಲ್ಲರನ್ನೂ ಸಮಾನವಾಗಿ ಕಾಣುವ, ಗೌರವಿಸುವ ಸ್ವಸ್ಥ ಸುಂದರ ಸಮಾಜ ಸಾಕಾರಗೊಳ್ಳುವುದು.

- Advertisement -

Related news

error: Content is protected !!