Thursday, August 6, 2026
spot_imgspot_img
spot_imgspot_img

ಒಂದು ಬಾಂಬ್… ಒಂದು ನಗರ… ಒಂದು ಶಾಶ್ವತ ಎಚ್ಚರಿಕೆ-:ಇವತ್ತು ಹಿರೋಶಿಮಾ ಡೇ

- Advertisement -
- Advertisement -

ಒಂದು ನಗರವನ್ನು ನಾಶ ಮಾಡಿದರೆ ಯುದ್ಧ ಕೊನೆಯಾಗಬಹುದೇ? ಒಂದು ಬಾಂಬ್ ಶಾಂತಿಯನ್ನು ತರಬಹುದೇ? ಸಾವಿರಾರು ನಿರಪರಾಧಿಗಳ ಜೀವವನ್ನು ಬಲಿಕೊಟ್ಟರೆ ಗೆಲುವು ನಮ್ಮದಾಗಬಹುದೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾದರೆ ನಾವು ಆಗಸ್ಟ್ 6, 1945ರ ಹಿರೋಶಿಮಾವನ್ನು ನೆನಪಿಸಿಕೊಳ್ಳಬೇಕು.

ಮಾನವ ಇತಿಹಾಸದಲ್ಲಿ ಯುದ್ಧಗಳು ಹೊಸದೇನಲ್ಲ. ಸಾಮ್ರಾಜ್ಯಗಳು ಹುಟ್ಟಿವೆ, ಅಳಿದು ಹೋಗಿವೆ. ಅರಸರು ಗೆದ್ದಿದ್ದಾರೆ, ಸೋತಿದ್ದಾರೆ. ಆದರೆ ಯುದ್ಧದ ಹೆಸರಿನಲ್ಲಿ ಇಡೀ ನಗರವನ್ನೇ ಒಂದೇ ಕ್ಷಣದಲ್ಲಿ ಬೂದಿಮಾಡಿದ ಘಟನೆಗಳು ಬಹಳ ವಿರಳ. ಅವುಗಳಲ್ಲಿ ಅತ್ಯಂತ ಭೀಕರವಾದದ್ದು ಹಿರೋಶಿಮಾ.

ಅಂದು 1945 ಆಗಸ್ಟ್‌ 6 ರ ಸೋಮವಾರ. ಆ ದಿನ ಬೆಳಿಗ್ಗೆ ಜಪಾನ್‌ನ ಹಿರೋಶಿಮಾ ನಗರ ತನ್ನ ಎಂದಿನ ಬದುಕಿನಲ್ಲೇ ಮುಳುಗಿತ್ತು. ಶಾಲೆಗಳ ಗಂಟೆ ಇನ್ನೇನು ಕೇಳಿಸಲಿತ್ತು. ಅಂಗಡಿಗಳು ತೆರೆಯುತ್ತಿದ್ದವು. ಕಛೇರಿಗಳು ಕಾರ್ಯಾರಂಭ ಮಾಡುತ್ತಿದ್ದವು. ಮಕ್ಕಳು ತಮ್ಮ ಭವಿಷ್ಯದ ಕನಸುಗಳನ್ನು ಹೊತ್ತು ಮನೆ ಬಿಟ್ಟು ಹೊರಟಿದ್ದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಈ ನಗರವೇ ಭೂಮಿಯ ಮೇಲಿನ ನರಕವಾಗಲಿದೆ ಎಂಬುದು ಯಾರೊಬ್ಬರಿಗೂ ಗೊತ್ತಿರಲಿಲ್ಲ.

ಬೆಳಿಗ್ಗೆ 8 ಗಂಟೆ 15 ನಿಮಿಷ. ಆಕಾಶದಲ್ಲಿ ಒಂದು ವಿಮಾನ ಕಾಣಿಸಿತು. ಯುದ್ಧ ನಡೆಯುತ್ತಿದ್ದ ಕಾರಣ ಜನರಿಗೆ ವಿಮಾನಗಳು ಹೊಸದೇನಲ್ಲ. ಆದರೆ ಅದು ಸಾಮಾನ್ಯ ವಿಮಾನವಾಗಿರಲಿಲ್ಲ. ಅಮೆರಿಕದ ಎನೋಲಾ ಗೇ ಎಂಬ ಬಿ–29 ಬಾಂಬರ್ ವಿಮಾನ ತನ್ನ ಹೊಟ್ಟೆಯಲ್ಲಿ ಜಗತ್ತಿನ ಮೊದಲ ಯುದ್ಧಕಾಲದ ಅಣುಬಾಂಬ್‌ ಅನ್ನು ಹೊತ್ತು ಹಾರುತ್ತಿತ್ತು. ಕೆಲವೇ ಕ್ಷಣಗಳಲ್ಲಿ “ಲಿಟಲ್ ಬಾಯ್” ಎಂಬ ಅಣುಬಾಂಬ್ ಅನ್ನು ಹಿರೋಶಿಮಾದ ಮೇಲೆ ಹಾಕಲಾಯಿತು.

ಮೊದಲು ಕಣ್ಣು ಕುರುಡಾಗಿಸುವಷ್ಟು ಪ್ರಖರವಾದ ಬೆಳಕು. ನಂತರ ಎಲ್ಲವನ್ನೂ ನುಂಗುವಂಥ ಸ್ಫೋಟ. ಸುಮಾರು ಸೂರ್ಯನ ಮೇಲ್ಮೈಯಷ್ಟೇ ಉಷ್ಣತೆಯ ತೀವ್ರತೆ ಕ್ಷಣಾರ್ಧದಲ್ಲಿ ನಗರದ ಮೇಲೆ ಆವರಿಸಿತು. ಸ್ಫೋಟದ ಕೇಂದ್ರದ ಬಳಿ ನಿಂತಿದ್ದ ಸಾವಿರಾರು ಜನರು ಏನಾಯಿತು ಎಂಬುದನ್ನು ಅರಿಯುವ ಮುನ್ನವೇ ಜೀವವನ್ನು ಕಳೆದುಕೊಂಡರು. ಅನೇಕರು ಕ್ಷಣಾರ್ಧದಲ್ಲೇ ಬೂದಿಯಾದರು. ಮನೆಗಳು ಗಾಳಿಯಲ್ಲಿ ಆಟಿಕೆಯಂತೆ ಹಾರಿಬಿದ್ದವು. ಶಾಲೆಗಳು ನೆಲಸಮವಾದವು. ಆಸ್ಪತ್ರೆಗಳು ಕುಸಿದುಬಿದ್ದವು. ರಸ್ತೆಗಳು ಬೆಂಕಿಯಿಂದ ಆವರಿಸಿದವು. ನಗರವಿಡೀ ಕಪ್ಪು ಹೊಗೆ ಮತ್ತು ಕೆಂಪು ಜ್ವಾಲೆಗಳ ಸಾಗರವಾಗಿ ಮಾರ್ಪಟ್ಟಿತು.

ಆ ಸ್ಫೋಟ ಕಟ್ಟಡಗಳನ್ನು ಮಾತ್ರ ಧ್ವಂಸ ಮಾಡಲಿಲ್ಲ. ತಾಯಿಯ ಮಡಿಲನ್ನು ಖಾಲಿ ಮಾಡಿತು. ಮಕ್ಕಳ ಬಾಲ್ಯವನ್ನು ಕಸಿದುಕೊಂಡಿತು. ಕುಟುಂಬಗಳನ್ನು ಚೂರುಚೂರು ಮಾಡಿತು. ವಿಕಿರಣದ ರೂಪದಲ್ಲಿ ಇನ್ನೂ ಹುಟ್ಟದ ತಲೆಮಾರುಗಳನ್ನೂ ಶಿಕ್ಷಿಸಿತು.

ಸ್ಫೋಟದಿಂದ ಬದುಕುಳಿದವರ ಸ್ಥಿತಿ ಅತ್ಯಂತ ಭೀಕರವಾಗಿತ್ತು. ಅವರ ಬಟ್ಟೆಗಳು ಸಂಪೂರ್ಣ ಸುಟ್ಟುಹೋಗಿದ್ದವು. ಚರ್ಮ ಸುಟ್ಟು ಕೈಗಳಿಂದ ನೇತಾಡುತ್ತಿತ್ತು. ಮುಖವನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಕಣ್ಣಿಗೆ ಬೆಳಕನ್ನು ಸಹಿಸಲಾಗುತ್ತಿರಲಿಲ್ಲ. ದೇಹ ಸುಟ್ಟ ನೋವಿನಿಂದ ಜನರು “ನೀರು… ನೀರು…” ಎಂದು ಕೂಗುತ್ತ ನದಿಯತ್ತ ಓಡುತ್ತಿದ್ದರು.

ಆದರೆ ನದಿಯೂ ಬದುಕನ್ನು ಉಳಿಸಲಿಲ್ಲ. ನೀರಿಗಾಗಿ ಧಾವಿಸಿದ ಸಾವಿರಾರು ಜನರು ನದಿಯ ದಡದಲ್ಲೇ ಕುಸಿದುಬಿದ್ದರು. ಕೆಲವರು ನದಿಯೊಳಗೆ ಬಿದ್ದು ಮತ್ತೆ ಮೇಲಕ್ಕೆ ಬರಲಿಲ್ಲ. ಆ ದಿನ ಹಿರೋಶಿಮಾದ ನದಿಗಳು ಕೇವಲ ನೀರನ್ನು ಮಾತ್ರವಲ್ಲ, ಅಸಂಖ್ಯಾತ ಜೀವಗಳ ಕೊನೆಯ ಉಸಿರನ್ನೂ ಹೊತ್ತು ಹರಿದವು.

ಆ ದಿನ ಬದುಕುಳಿದವರು ನಂತರ ಹೇಳಿದ ಒಂದು ಮಾತು ಇತಿಹಾಸದಲ್ಲಿ ಉಳಿದುಕೊಂಡಿತು. “ನಮಗೆ ಸುತ್ತಮುತ್ತ ಮನುಷ್ಯರೇ ಕಾಣುತ್ತಿದ್ದರು. ಆದರೆ ಅವರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ.”

ಅನೇಕ ಮಕ್ಕಳು ಶಾಲೆಯ ಆವರಣದಲ್ಲೇ ಸಿಲುಕಿಕೊಂಡರು. ತಮ್ಮ ಮಕ್ಕಳನ್ನು ಹುಡುಕುತ್ತ ಪೋಷಕರು ಅತ್ತಿತ್ತ ಓಡಾಡಿದರು. ಅನೇಕ ಕುಟುಂಬಗಳು ಒಂದೇ ದಿನದಲ್ಲಿ ಸಂಪೂರ್ಣವಾಗಿ ಅಳಿದುಹೋದವು.

ತನ್ನ ಮಗುವನ್ನು ಹುಡುಕುತ್ತ ಅವಶೇಷಗಳ ನಡುವೆ ಓಡಾಡುತ್ತಿದ್ದ ತಾಯಿಗೆ ಸಿಕ್ಕಿದ್ದು ಮಗುವಿನ ಊಟದ ಡಬ್ಬಿ ಮಾತ್ರ. ಒಬ್ಬ ತಂದೆಗೆ ತನ್ನ ಮಗಳ ಕೈಯಲ್ಲಿದ್ದ ಉಕ್ಕಿನ ಬಳೆ ಮಾತ್ರ ಗುರುತಾಗಿ ಉಳಿಯಿತು. ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳನ್ನು ರಕ್ಷಿಸಲು ಯತ್ನಿಸಿದರೂ, ತಾನೂ ಅವರೊಡನೆ ಸುಟ್ಟುಹೋದ. ಯುದ್ಧದ ಅಂಕಿಅಂಶಗಳಲ್ಲಿ ಈ ಕಥೆಗಳು ಕಾಣುವುದಿಲ್ಲ. ಆದರೆ ಹಿರೋಶಿಮಾದ ನಿಜವಾದ ಇತಿಹಾಸ ಇಂತಹ ಸಾವಿರಾರು ಕುಟುಂಬಗಳ ಕಣ್ಣೀರಿನಲ್ಲಿ ಬರೆಯಲ್ಪಟ್ಟಿದೆ.

ಸ್ಫೋಟದ ಕೆಲವು ಗಂಟೆಗಳ ನಂತರ ವಿಚಿತ್ರ ಮಳೆ ಸುರಿಯತೊಡಗಿತು. ಅದು ಸಾಮಾನ್ಯ ಮಳೆಯಲ್ಲ. ಹೊಗೆ, ಧೂಳು ಮತ್ತು ವಿಕಿರಣದ ಕಣಗಳಿಂದ ಕೂಡಿದ ಕಪ್ಪು ಮಳೆ. ದಾಹದಿಂದ ಬಳಲುತ್ತಿದ್ದ ಜನರು ಆ ನೀರನ್ನು ಕುಡಿದರು. ಆದರೆ ಅವರಿಗೆ ಅದು ಬದುಕಲ್ಲ, ಮತ್ತಷ್ಟು ವಿಷವನ್ನು ದೇಹದೊಳಗೆ ಸೇರಿಸುತ್ತಿದೆ ಎಂದು ತಿಳಿದಿರಲಿಲ್ಲ.

ಆ ದಿನ ಬದುಕುಳಿದ ಅನೇಕರು ಮುಂದಿನ ತಿಂಗಳುಗಳಲ್ಲಿ ಮತ್ತು ವರ್ಷಗಳಲ್ಲಿ ವಿಕಿರಣದ ಭೀಕರ ಪರಿಣಾಮಗಳನ್ನು ಅನುಭವಿಸಿದರು. ಕೂದಲು ಉದುರತೊಡಗಿತು. ಗಾಯಗಳು ಗುಣವಾಗಲಿಲ್ಲ. ರಕ್ತಸ್ರಾವ ಆರಂಭವಾಯಿತು. ಕ್ಯಾನ್ಸರ್ ಮತ್ತು ರಕ್ತದ ಕಾಯಿಲೆಗಳು ಕಾಣಿಸಿಕೊಂಡವು. ಅನೇಕ ಮಕ್ಕಳು ಜನ್ಮಜಾತ ಸಮಸ್ಯೆಗಳೊಂದಿಗೆ ಜನಿಸಿದರು.

ಒಂದು ಬಾಂಬ್ ಕೇವಲ ಆ ದಿನದ ಜೀವಗಳನ್ನು ಕಸಿದುಕೊಳ್ಳಲಿಲ್ಲ; ಇನ್ನೂ ಹುಟ್ಟದ ಮಕ್ಕಳ ಭವಿಷ್ಯವನ್ನೂ ಬದಲಾಯಿಸಿತು. ಸ್ಫೋಟದ ನಂತರ ನಗರದಲ್ಲಿ ಗಡಿಯಾರಗಳು ನಿಂತುಹೋಗಿದ್ದವು. ಆದರೆ ಹಿರೋಶಿಮಾದ ಜನರ ನೆನಪಿನಲ್ಲಿ ಆ ಸಮಯ ಮಾತ್ರ ಇಂದಿಗೂ ಅಚ್ಚೊತ್ತಿದ ಗಾಯವಾಗಿದೆ.

ಇಂದು ಹಿರೋಶಿಮಾ ಮತ್ತೆ ಹಸಿರಾಗಿದೆ. ಎತ್ತರದ ಕಟ್ಟಡಗಳಿವೆ. ಟ್ರಾಮ್‌ಗಳು ಓಡುತ್ತಿವೆ. ಶಾಲೆಗಳಲ್ಲಿ ಮಕ್ಕಳ ನಗು ಕೇಳಿಸುತ್ತದೆ. ಆದರೆ ನಗರದ ಮಧ್ಯದಲ್ಲಿರುವ ‘ಅಣುಬಾಂಬ್ ಗುಮ್ಮಟ’ ಆ ದಿನದ ಸಾಕ್ಷಿಯಾಗಿ ಇನ್ನೂ ನಿಂತಿದೆ.

ಶಾಂತಿ ಸ್ಮಾರಕ ಸಂಗ್ರಹಾಲಯದಲ್ಲಿ ಸುಟ್ಟ ಮಗುವಿನ ಸಮವಸ್ತ್ರ, ಕರಗಿದ ಗಾಜಿನ ಬಾಟಲಿ, ನಿಂತುಹೋದ ಕೈಗಡಿಯಾರ, ಸುಟ್ಟು ಕರಕಲಾದ ಊಟದ ಡಬ್ಬಿ ಮತ್ತು ಸಾವಿರಾರು ಛಾಯಾಚಿತ್ರಗಳು ಆ ಬೆಳಗಿನ ಕಥೆಯನ್ನು ಹೇಳುತ್ತಿವೆ. ಅಲ್ಲಿಗೆ ಭೇಟಿ ನೀಡುವವರು ಕಣ್ಣೀರಿಲ್ಲದೆ ಹೊರಬರುವುದು ಅಪರೂಪ. ಯಾಕೆಂದರೆ, ಅಲ್ಲಿ ಕಾಣುವುದು ಕೇವಲ ಯುದ್ಧದ ಇತಿಹಾಸವಲ್ಲ; ಮಾನವೀಯತೆಯ ಸೋಲು.

ಯುದ್ಧವೆಂದರೆ ಸಾಮಾನ್ಯವಾಗಿ ಸೈನಿಕರ ನಡುವಿನ ಸಂಘರ್ಷ ಎಂದು ನಾವು ಭಾವಿಸುತ್ತೇವೆ. ಆದರೆ ಹಿರೋಶಿಮಾ ನಮಗೆ ಬೇರೆಯದೇ ಸತ್ಯವನ್ನು ಹೇಳಿತು. ಯುದ್ಧದ ಮೊದಲ ಬಲಿಪಶು ಸೈನಿಕರಲ್ಲ; ಸಾಮಾನ್ಯ ನಾಗರಿಕರು. ಮಕ್ಕಳಿಗೆ ಯುದ್ಧದ ರಾಜಕೀಯ ಗೊತ್ತಿರುವುದಿಲ್ಲ. ಮಹಿಳೆಯರಿಗೆ ಗಡಿವಿವಾದಗಳ ಅರಿವಿರುವುದಿಲ್ಲ. ವೃದ್ಧರಿಗೆ ಅಧಿಕಾರದ ಆಸೆಯಿರುವುದಿಲ್ಲ. ಆದರೂ ಯುದ್ಧದ ಬೆಲೆ ಕಟ್ಟುವುದು ಅವರೇ.

ಆಗಸ್ಟ್ 6 ಎಂಬುದು ಇಂದು ಕೇವಲ ಸ್ಮರಣೆಯ ಒಂದು ದಿನವಲ್ಲ; ಅದು ಒಂದು ಜವಾಬ್ದಾರಿಯನ್ನು ನೆನಪಿಸುವ ದಿನ. ವಿಜ್ಞಾನವು ಮಾನವ ಬದುಕನ್ನು ಉಳಿಸಲು ಬೇಕಿದೆಯೇ ಹೊರತು ವಿನಾಶಕ್ಕಲ್ಲ. ರಾಜಕೀಯವು ಶಾಂತಿಯನ್ನು ನಿರ್ಮಿಸಬೇಕು, ಯುದ್ಧವನ್ನು ಅಲ್ಲ. ಶಿಕ್ಷಣವು ದ್ವೇಷವನ್ನು ಅಲ್ಲ, ಸಹಬಾಳ್ವೆಯನ್ನು ಕಲಿಸಬೇಕು.

ಹಿರೋಶಿಮಾ ಇತಿಹಾಸದ ಒಂದು ಅಧ್ಯಾಯವಲ್ಲ. ಅದು ಮಾನವಕುಲದ ದುರಂತಸಾಕ್ಷಿ. ಆಗಸ್ಟ್‌ 6 ಅನ್ನು ಜಗತ್ತು ಪ್ರತಿವರ್ಷ ಸ್ಮರಿಸುವುದರ ಉದ್ದೇಶ ದ್ವೇಷವನ್ನು ಉಳಿಸಿಕೊಳ್ಳುವುದಲ್ಲ. ಮನುಷ್ಯನು ಮತ್ತೊಮ್ಮೆ ಇಂತಹ ತಪ್ಪು ಮಾಡದಿರಲಿ ಎಂಬ ಎಚ್ಚರಿಕೆಯನ್ನು ಜೀವಂತವಾಗಿಡುವುದೇ ಅದರ ಆಶಯ. ಏಕೆಂದರೆ, ಒಂದು ಅಣುಬಾಂಬ್ ಒಂದು ನಗರವನ್ನು ಮಾತ್ರ ನಾಶ ಮಾಡುವುದಿಲ್ಲ; ಅದು ಮನುಷ್ಯನ ಕನಸುಗಳನ್ನು, ಸಂಬಂಧಗಳನ್ನು, ನೆನಪುಗಳನ್ನು ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನೂ ಸುಟ್ಟುಹಾಕುತ್ತದೆ.

✍️ಡಾ. ಮೈತ್ರಿ ಭಟ್, ವಿಟ್ಲ

- Advertisement -

Related news

error: Content is protected !!