Monday, August 17, 2026
spot_imgspot_img
spot_imgspot_img

ನಾಗರಪಂಚಮಿ: ನಂಬಿಕೆಯಾಚೆಗಿನ ನಾಗತತ್ತ್ವ

- Advertisement -
- Advertisement -

ಒಂದು ಹಬ್ಬ… ಹಲವು ಅರ್ಥಗಳು. ಒಂದು ನಾಗರೂಪ… ಹಲವು ತಾತ್ವಿಕ ಸಂಕೇತಗಳು

ಭಾರತೀಯ ಸಂಸ್ಕೃತಿಯಲ್ಲಿ ನಾಗಾರಾಧನೆ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಜನಪದ ನಂಬಿಕೆಗಳು, ಪರಿಸರದೊಂದಿಗಿನ ಸಹಬಾಳ್ವೆ ಮತ್ತು ಸ್ಥಳೀಯ ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿ ರೂಪುಗೊಂಡಿದೆ. ಮಣ್ಣು, ನೀರು, ಕೃಷಿ ಮತ್ತು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಭಾರತೀಯ ಹಬ್ಬ-ಹರಿದಿನಗಳಂತೆ ನಾಗಾರಾಧನೆಯೂ ಈ ನೆಲದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ.

ಭಾರತೀಯ ಪರಂಪರೆಯಲ್ಲಿ ನಾಗನಿಗೆ ವಿಶೇಷ ಸ್ಥಾನವಿದೆ. ಪುರಾಣ, ಜನಪದ, ಧಾರ್ಮಿಕ ಆಚರಣೆ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ನಾಗನ ಉಲ್ಲೇಖ ನಿರಂತರವಾಗಿ ಕಾಣಿಸುತ್ತದೆ. ನಾಗನನ್ನು ಶಕ್ತಿ, ರಕ್ಷಣೆ, ಫಲವತ್ತತೆ, ಮಳೆ ಮತ್ತು ಭೂಮಿಯೊಂದಿಗೆ ಸಂಬಂಧಿಸಿದ ಸಂಕೇತವಾಗಿ ಕಾಣಲಾಗಿದೆ.

ಸರ್ಪವನ್ನು ಕಂಡಾಗ ಮನುಷ್ಯನೊಳಗೆ ಸಹಜವಾಗಿ ಭಯ ಮೂಡುತ್ತದೆ. ಆದರೆ ಭಾರತೀಯ ಸಂಸ್ಕೃತಿ ಆ ಭಯವನ್ನು ಭಕ್ತಿಯಾಗಿ ಪರಿವರ್ತಿಸಿದೆ. ಅಪಾಯಕಾರಿಯೆಂದು ಭಾವಿಸುವ ಜೀವಿಯನ್ನೇ ದೇವತೆಯ ರೂಪದಲ್ಲಿ ಆರಾಧಿಸುವುದು ಒಂದು ವಿಶಿಷ್ಟ ಸಾಂಸ್ಕೃತಿಕ ಮನೋಭಾವ. ಇದರೊಳಗೆ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಸ್ಥಾನವಿದೆ ಎಂಬ ಸಂದೇಶವೂ ಅಡಗಿದೆ.

ಇದು ಮಣ್ಣಿನೊಂದಿಗೆ ಬೆಸೆದುಕೊಂಡ ಹಬ್ಬ:ನಾಗರಪಂಚಮಿಯ ಆಚರಣೆ ಮಣ್ಣಿನ ಬದುಕಿಗೆ ಬಹಳ ಹತ್ತಿರವಾಗಿದೆ. ಕೃಷಿ ಪ್ರಧಾನ ಸಮಾಜದಲ್ಲಿ ಭೂಮಿ, ಮಳೆ, ಬೆಳೆ ಮತ್ತು ಜೀವಜಗತ್ತು ಪರಸ್ಪರ ಅವಲಂಬಿತವಾಗಿವೆ. ಮಣ್ಣನ್ನು ಕೇವಲ ಸಂಪನ್ಮೂಲವಾಗಿ ನೋಡದೆ, ಜೀವದ ಮೂಲವೆಂದು ಗೌರವಿಸುವ ಮನೋಭಾವವೇ ಇಂತಹ ಆಚರಣೆಗಳ ಮೂಲಕ ತಲೆಮಾರುಗಳಿಂದ ಮುಂದುವರಿದಿದೆ. ಆದ್ದರಿಂದ ನಾಗರಪಂಚಮಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ ಪರಿಸರದೊಂದಿಗೆ ಮನುಷ್ಯನ ಸಹಬಾಳ್ವೆಯ ಸಂಕೇತವಾಗಿಯೂ ಅರ್ಥೈಸಬೇಕಾಗಿದೆ.

ನಾಗಾರಾಧನೆಯ ವೈವಿಧ್ಯ: ಕರಾವಳಿ ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಾಗಾರಾಧನೆಗೆ ವಿಶಿಷ್ಟವಾದ ರೂಪಗಳಿವೆ. ನಾಗಬನ, ನಾಗನಕಲ್ಲು, ನಾಗಾರಾಧನೆ, ನಾಗಮಂಡಲ, ಆಶ್ಲೇಷ ಬಲಿ ಮೊದಲಾದ ಆಚರಣೆಗಳು ಸ್ಥಳೀಯ ಸಂಪ್ರದಾಯ ಮತ್ತು ಜನಪದ ನಂಬಿಕೆಗಳೊಂದಿಗೆ ಬೆಸೆದುಕೊಂಡಿವೆ. ಪ್ರದೇಶ ಬದಲಾದಂತೆ ಆಚರಣೆಯ ವಿಧಾನ ಬದಲಾಗಬಹುದು. ಆದರೆ ಅದರ ಮೂಲಭಾವ ಒಂದೇ – ನಾಗನಿಗೆ ಗೌರವ, ಪ್ರಕೃತಿಗೆ ಗೌರವ ಮತ್ತು ಪರಂಪರೆಗೆ ಗೌರವ.

ಅದರಲ್ಲೂ ನಾಗಬನ ಎಂಬುದು ಭಕ್ತಿಯ ನೆರಳಿನಲ್ಲಿ ಬೆಳೆದ ಹಸಿರು ಲೋಕ. ನಾಗನಕಲ್ಲು, ನಾಗನಕಟ್ಟೆ, ನಾಗಬನ ಮತ್ತು ನಾಗಪೂಜೆಯ ಆಚರಣೆಗಳು ಸ್ಥಳೀಯ ಜನಜೀವನದೊಂದಿಗೆ ಬೆಸೆದುಕೊಂಡಿವೆ. ನಾಗಬನದ ಪರಂಪರೆಯನ್ನು ಪರಿಸರದ ದೃಷ್ಟಿಯಿಂದ ನೋಡಿದಾಗ ಅದರ ಮಹತ್ವ ಸ್ಪಷ್ಟವಾಗುತ್ತದೆ. ಒಂದು ಪ್ರದೇಶವನ್ನು ಪವಿತ್ರವೆಂದು ಪರಿಗಣಿಸಿ ಮರಗಳನ್ನು ಕಡಿಯದೆ, ಅಲ್ಲಿರುವ ಜೀವಿಗಳಿಗೆ ಕಿರಿಕಿರಿಯನ್ನುಂಟು ಮಾಡದೆ ಉಳಿಸುವ ಸಂಪ್ರದಾಯವು ಪಾರಂಪರಿಕ ಸಂರಕ್ಷಣೆಯ ಒಂದು ರೂಪವಾಗಿತ್ತು. ಇಂದಿನ ಕಾಂಕ್ರೀಟ್ ವಿಸ್ತರಣೆಯ ನಡುವೆ ಇಂತಹ ಸಣ್ಣ ಹಸಿರು ಪ್ರದೇಶಗಳು ಜೀವವೈವಿಧ್ಯದ ಆಶ್ರಯಗಳಾಗಿವೆ. ಅವುಗಳಲ್ಲಿ ಗಿಡಮರಗಳು, ಪೊದೆಗಳು, ಕೀಟಗಳು, ಪಕ್ಷಿಗಳು, ಸರೀಸೃಪಗಳು ಸೇರಿದಂತೆ ಅನೇಕ ಜೀವಿಗಳು ಬದುಕಲು ಅವಕಾಶವನ್ನು ಪಡೆಯುತ್ತವೆ. ಆದರೆ ಇಂದು ಹಲವೆಡೆ ಇರುವ ಮರಗಳನ್ನು ಕಡಿದು, ಸುತ್ತಮುತ್ತಲಿನ ಹಸಿರನ್ನು ನಾಶಮಾಡಿ, ನಾಗನಕಟ್ಟೆ ನಿರ್ಮಿಸುವ ಪ್ರವೃತ್ತಿಯೂ ಕಂಡುಬರುತ್ತದೆ. ಇದು ನಾಗಾರಾಧನೆಯ ಮೂಲ ಆಶಯವನ್ನೇ ಪ್ರಶ್ನಿಸುವಂತಹ ವಿಪರ್ಯಾಸ. ನಿಜ ಹೇಳಬೇಕೆಂದರೆ – “ನಾಗನ ಹೆಸರಿನಲ್ಲಿ ಮರಗಳನ್ನು ಕಡಿದು ನಾಗನಕಟ್ಟೆ ನಿರ್ಮಿಸುವುದಕ್ಕಿಂತ, ನಾಗನಿಗೆ ಆಶ್ರಯ ನೀಡುವ ಮರಗಳನ್ನು ಉಳಿಸುವುದೇ ನಿಜವಾದ ನಾಗಾರಾಧನೆ.”

ಪರಿಸರದ ಪಾಠ:ಇಂದಿನ ಕಾಲದಲ್ಲಿ ನಾಗರಪಂಚಮಿಯ ಮಹತ್ವವನ್ನು ಹೊಸ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಸರ್ಪಗಳು ಪರಿಸರ ವ್ಯವಸ್ಥೆಯ ಪ್ರಮುಖ ಭಾಗ. ಆಹಾರ ಸರಪಳಿಯಲ್ಲಿ ಅವು ನಿರ್ವಹಿಸುವ ಪಾತ್ರವೂ ಮಹತ್ವದ್ದು. ಆದ್ದರಿಂದ ಹಬ್ಬದ ಸಂದರ್ಭದಲ್ಲಿ ಸರ್ಪಗಳನ್ನು ಹಿಡಿದು ಪ್ರದರ್ಶಿಸುವುದು, ಅವುಗಳಿಗೆ ಹಾನಿ ಮಾಡುವುದು ಅಥವಾ ಅಜ್ಞಾನದಿಂದ ಅವುಗಳ ಜೀವಕ್ಕೆ ಅಪಾಯ ಉಂಟುಮಾಡುವುದು ಆಚರಣೆಯ ಮೂಲ ಆಶಯಕ್ಕೆ ವಿರುದ್ಧ. ನಾಗನನ್ನು ಪೂಜಿಸುವುದಕ್ಕಿಂತ ಮೊದಲು ನಾಗನನ್ನು ಸಂರಕ್ಷಿಸುವ ಮನೋಭಾವ ಬೆಳೆಸುವುದು ಮುಖ್ಯ.

ನಾಗನ ರೂಪವನ್ನು ಭಾರತೀಯ ತತ್ತ್ವಚಿಂತನೆಯಲ್ಲಿಯೂ ವಿವಿಧ ರೀತಿಯಲ್ಲಿ ಅರ್ಥೈಸಲಾಗಿದೆ. ಕುಂಡಲಿನಿ ಶಕ್ತಿಯ ಸಂಕೇತವಾಗಿ ನಾಗರೂಪವನ್ನು ಕಾಣಲಾಗಿದೆ. ಸೃಷ್ಟಿ, ಶಕ್ತಿ, ಚೈತನ್ಯ ಮತ್ತು ಪರಿವರ್ತನೆಯೊಂದಿಗೆ ನಾಗನ ಪ್ರತೀಕಾತ್ಮಕ ಸಂಬಂಧವನ್ನು ಬೆಳೆಸಲಾಗಿದೆ. ಹೀಗಾಗಿ ನಾಗಾರಾಧನೆಯನ್ನು ಶಕ್ತಿ ಮತ್ತು ಚೈತನ್ಯವನ್ನು ಅರಿಯುವ ಪ್ರಯತ್ನವಾಗಿಯೂ ವ್ಯಾಖ್ಯಾನಿಸಬಹುದು.

ಆಚರಣೆ ಬದಲಾದರೂ ಆಶಯ ಉಳಿಯಲಿ:ಕಾಲ ಬದಲಾಗಿದೆ. ಬದುಕಿನ ವಿಧಾನ ಬದಲಾಗಿದೆ. ನಗರೀಕರಣ ಹೆಚ್ಚಾಗಿದೆ. ಮಣ್ಣಿನೊಂದಿಗೆ ನೇರ ಸಂಪರ್ಕ ಕಡಿಮೆಯಾಗಿದೆ. ಆದರೂ ನಾಗರಪಂಚಮಿಯಂತಹ ಹಬ್ಬಗಳು ನಮ್ಮ ಬೇರುಗಳನ್ನು ನೆನಪಿಸುತ್ತವೆ. ಹೀಗಿರುವಾಗ, ಹಬ್ಬದ ಆಚರಣೆ ಕೇವಲ ಸಂಪ್ರದಾಯದ ಪುನರಾವರ್ತನೆಯಾಗದೆ, ಅದರ ಹಿಂದಿರುವ ಅರ್ಥವನ್ನು ಹೊಸ ತಲೆಮಾರಿಗೆ ತಿಳಿಸುವಂತಾಗಬೇಕು.

ನಾಗರಪಂಚಮಿಯಂದು ನಾಗನಿಗೆ ಹಾಲು ಎರೆಯುವುದಕ್ಕಿಂತ, ಸರ್ಪಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸುವುದು; ನಾಗಬನಗಳನ್ನು ಉಳಿಸುವುದು; ಜೀವವೈವಿಧ್ಯವನ್ನು ಕಾಪಾಡುವುದು; ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವುದು – ಇವೇ ಇಂದಿನ ಕಾಲಕ್ಕೆ ಸೂಕ್ತವಾದ ನಾಗಪೂಜೆ.

ನಂಬಿಕೆಯಿಂದ ಜವಾಬ್ದಾರಿಯತ್ತ:ಮನುಷ್ಯನ ಬದುಕು ಪ್ರಕೃತಿಯಿಂದ ಬೇರ್ಪಟ್ಟದ್ದಲ್ಲ’ ಎಂಬ ಸರಳ ಸತ್ಯವನ್ನು ನಾಗರಪಂಚಮಿಯು ನೆನಪಿಸುತ್ತದೆ. ನಾವು ಆರಾಧಿಸುವ ನಾಗ ನಮ್ಮ ಪರಿಸರದ ಒಂದು ಜೀವಿ. ನಾವು ಪೂಜಿಸುವ ಭೂಮಿ ನಮ್ಮ ಬದುಕಿನ ಆಧಾರ. ಹಾಗೆಯೇ ನಾವು ಗೌರವಿಸುವ ಪರಂಪರೆ ಇದೇ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ನಾಗರಪಂಚಮಿಯ ನಿಜವಾದ ಆಶಯವು ಪೂಜೆಯಲ್ಲಿ ಮಾತ್ರವಲ್ಲ; ಪ್ರಕೃತಿಯನ್ನು ಗೌರವಿಸುವ ಮನಸ್ಸಿನಲ್ಲಿ, ಜೀವಜಗತ್ತನ್ನು ಕಾಪಾಡುವ ಜವಾಬ್ದಾರಿಯಲ್ಲಿ ಮತ್ತು ಮುಂದಿನ ಪೀಳಿಗೆಗೆ ಉಳಿಸಬೇಕೆಂಬ ಸಂಕಲ್ಪದಲ್ಲಿ ಅಡಗಿದೆ.

ಡಾ. ಮೈತ್ರಿ ಭಟ್, ವಿಟ್ಲ

- Advertisement -

Related news

error: Content is protected !!