ಹೊಸದಿಲ್ಲಿ: ಹದಿನೈದು ವರ್ಷದ ಬಾಲಕಿಗೆ ಆಕೆಯ 7 ತಿಂಗಳ ಗರ್ಭವನ್ನು ತೆಗೆಸಲು ಶುಕ್ರವಾರ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್, ಮಹಿಳೆಯರಿಗೆ, ಮುಖ್ಯವಾಗಿ ಬಾಲಕಿಯರಿಗೆ ಅವರ ಇಚ್ಛೆಗೆ ವಿರುದ್ಧವಾಗಿ ಗರ್ಭವನ್ನು ಮುಂದುವರಿಸಲು ನ್ಯಾಯಾಲಯ ಬಲವಂತಪಡಿಸುವಂತಿಲ್ಲ ಎಂದು ಹೇಳಿದೆ.ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರ ಪೀಠ, ಜನಿಸದ ಮಗುವಿಗಿಂತ ಗರ್ಭಿಣಿ ಮಹಿಳೆಯ ಆಯ್ಕೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದೆ.ಅಂತಹ ಗರ್ಭದಾರಣೆಯನ್ನು ಮುಂದುವರಿಸುವುದರಿಂದ ಬಾಲಕಿಯ ಮಾನಸಿಕ ಆರೋಗ್ಯ ಶಿಕ್ಷಣ, ಸಾಮಾಜಿಕ ಸ್ಥಾನಮಾನ ಮತ್ತು ಒಟ್ಟು ಅಭಿವೃದ್ಧಿಯ ಮೇಲೆ ಗಂಭೀರ ಮತ್ತು ದೀರ್ಘಕಾಲೀನ ಪರಿಣಾಮ ಉಂಟು ಮಾಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.ಸಂತಾನೋತ್ಪತ್ತತಿ ಸ್ವಾಯತ್ತೆಯು ಮಹಿಳೆಯ ಹಕ್ಕುಗಳ ಕೇಂದ್ರವಾಗಿದೆ ಎಂದು ಗಮನ ಸೆಳೆದ ಪೀಠ, ಇಷ್ಟವಿಲ್ಲದ ಗರ್ಭವನ್ನು ಮುಂದುವರಿಸುವಂತೆ ಮಹಿಳೆಯನ್ನು ಒತ್ತಾಯಿಸುವುದು ಭಾರತದ ಸಂವಿಧಾನ 21ನೇ ವಿಧಿಯ ಅಡಿಯಲ್ಲಿರುವ ಆಕೆಯ ಸಾಂವಿಧಾನಿಕ ರಕ್ಷಣೆಯ ಉಲ್ಲಂಘಿಸಬಹುದು ಎಚ್ಚರಿಸಿದೆ.ಒಬ್ಬರ ದೇಹಕ್ಕೆ ಸಂಬಂಧಿಸಿ, ಮುಖ್ಯವಾಗಿ ಸಂತಾನೋತ್ಪತ್ತಿ ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಸಂವಿಧಾನದ 21ನೆ ವಿಧಿಯ ಅಡಿಯ ವೈಯುಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ಅವಿಭಾಜ್ಯ ಅಂಶವಾಗಿದೆ ಎಂದು ಅದು ಹೇಳಿದೆ.ಮುಖ್ಯವಾಗಿ ಅಪ್ರಾಪ್ತರು ಹಾಗೂ ಅನಪೇಕ್ಷಿತ ಗರ್ಭಗಳ ಪ್ರಕರಣಗಳಲ್ಲಿ ಸಕಾರಣವಿಲ್ಲದ ನಿರ್ಬಂಧಗಳನ್ನು ವಿಧಿಸುವ ಮೂಲಕ ಅವರ ಹಕ್ಕನ್ನು ನಿರಾಕರಿಸುವಂತಿಲ್ಲ.ನ್ಯಾಯಾಲಯ ಯಾವುದೇ ಮಹಿಳೆಯನ್ನು ಮುಖ್ಯವಾಗಿ ಬಾಲಕಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಗರ್ಭವನ್ನು ಪೂರ್ಣಾವಧಿ ವರೆಗೆ ಮುಂದುವರಿಸಲು ಬಲವಂತಪಡಿಸಬಾರದು ಎಂದು ಪೀಠ ಹೇಳಿದೆ.ಇಂತಹ ಬಲಂವತ ಆಕೆಯ ನಿರ್ಧಾರದ ಸ್ವಾಯತ್ತತೆಯನ್ನು ನಿರ್ಲಕ್ಷಿಸುವುದಷ್ಟೇ ಅಲ್ವ ಬಲವಂತವಾಗಿ ಹೆರಿಗೆಯಾದರೆ ಆಕೆಗೆ ಗಂಭೀರ ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ಆಘಾತವನ್ನು ಉಂಟು ಮಾಡುತ್ತದೆ ಎಂದು ಪೀಠ ಹೇಳಿದೆ.








