Wednesday, July 22, 2026
spot_imgspot_img
spot_imgspot_img

ಬಾಂಬ್ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಕಳೇಬರಗಳು 25 ದಿನಗಳ ಬಳಿಕ ಪೋಷಕರಿಗೆ ಹಸ್ತಾಂತರ

- Advertisement -
- Advertisement -

ಇಂಫಾಲ: ಎಪ್ರಿಲ್ ತಿಂಗಳಲ್ಲಿ ಮಣಿಪುರದ ಬಿಷ್ಣುಪು‌ರ್ ಜಿಲ್ಲೆಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ಇಬ್ಬರು ಮಕ್ಕಳ ಕಳೇಬರಗಳನ್ನು ಶನಿವಾರ ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಷ್ಕರ್ಮಿಗಳ ವಿರುದ್ಧ ಶೀಘ್ರದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದ ಮೃತ ಮಕ್ಕಳ ಪೋಷಕರು, ಆರಂಭದಲ್ಲಿ ತಮ್ಮ ಮಕ್ಕಳ ಕಳೇಬರಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು. ಇದರ ಪರಿಣಾಮವಾಗಿ ಐದು ವರ್ಷದ ಬಾಲಕ ಹಾಗೂ ಆತನ ಆರು ವರ್ಷದ ಸಹೋದರಿಯ ಕಳೇಬರಗಳನ್ನು ಸುಮಾರು 25 ದಿನಗಳ ಕಾಲ ಶವಾಗಾರದಲ್ಲೇ ಇರಿಸಲಾಗಿತ್ತು.

ಮಕ್ಕಳ ಕಳೇಬರಗಳನ್ನು ಸ್ವೀಕರಿಸುವಂತೆ ಪೋಷಕರಿಗೆ ಎಪ್ರಿಲ್ 25ರಂದು ಮಣಿಪುರ ಮುಖ್ಯಮಂತ್ರಿ ವೈ. ಖೇಮ್ ಚಂದ್ ಸಿಂಗ್ ಮನವಿ ಮಾಡಿದ್ದರು. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಮಕ್ಕಳ ಕಳೇಬರಗಳನ್ನು ಇಂಫಾಲದಲ್ಲಿನ ಪ್ರಾಂತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶವಾಗಾರದಲ್ಲಿ ಇರಿಸಲಾಗಿತ್ತು.

ಈ ಘಟನೆಗೆ ವಿರೋಧವಾಗಿ ಮಣಿಪುರದ ಐದು ಕಣಿವೆ ಜಿಲ್ಲೆಗಳಲ್ಲಿ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಯಿತು.

ಶನಿವಾರ ಬೆಳಿಗ್ಗೆ ಮಕ್ಕಳ ಕಳೇಬರಗಳನ್ನು ತೆರೆದ ವಾಹನದಲ್ಲಿ ಅಂತ್ಯಕ್ರಿಯೆಗೆ ಕರೆದೊಯ್ಯಲಾಯಿತು. ಈ ವೇಳೆ ಟ್ರಾಂಗ್ಲೋಬಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ನೂರಾರು ಮಂದಿ ಮಕ್ಕಳ ಕಳೇಬರಗಳಿಗೆ ಪುಷ್ಪನಮನ ಸಲ್ಲಿಸಿದರು.

- Advertisement -

Related news

error: Content is protected !!