




ಬೆಂಗಳೂರು: ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮನೆ ಮಗ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದು, ಸಿಎಂ ಆದ ಬಳಿಕ ಮೊದಲ ಬಾರಿಗೆ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಅವರಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅದ್ದೂರಿ ಸ್ವಾಗತ ಕೋರಿದರು.
ಹಾರೋಹಳ್ಳಿ ಸರ್ಕಲ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರ ಬೃಹತ್ ಬ್ಯಾನರ್‌ಗಳು, ಕಟೌಟ್‌ಗಳು ಹಾಗೂ ಕಾಂಗ್ರೆಸ್ ಬಾವುಟಗಳಿಂದ ಪಟ್ಟಣ ಸಿಂಗಾರಗೊಂಡಿತ್ತು. ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಜಮಾಯಿಸಿದ್ದರು.
ಹಾರೋಹಳ್ಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ರೋಡ್ ಶೋ ವೇಳೆ ಜನರು ಹೂಮಳೆ ಸುರಿಸಿ ಸಂಭ್ರಮಿಸಿದರು. ಮುಖ್ಯಮಂತ್ರಿಯವರಿಗೆ ವಿಶೇಷ ಸ್ವಾಗತ ನೀಡಲು ಜನಪದ ಕಲಾತಂಡಗಳು ಸಜ್ಜಾಗಿದ್ದವು. ತಮಟೆ, ಡೊಳ್ಳು, ನಗಾರಿ, ಹುಲಿವೇಷ ಹಾಗೂ ಪೂಜಾ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾಪ್ರದರ್ಶನಗಳು ಗಮನ ಸೆಳೆದವು. ಮಹಿಳೆಯರು ಪೂರ್ಣಕುಂಭದೊಂದಿಗೆ ಮುಖ್ಯಮಂತ್ರಿ ಅವರನ್ನು ಸ್ವಾಗತಿಸಿದರು.
ಈ ವೇಳೆ ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯಿಂದ ತಯಾರಿಸಲಾದ ಬೃಹತ್ ಹಾರ ಎಲ್ಲರ ಗಮನ ಸೆಳೆಯಿತು. ಮುಖ್ಯಮಂತ್ರಿಗೆ ದೃಷ್ಟಿ ತಾಗದಿರಲಿ ಎಂಬ ಉದ್ದೇಶದಿಂದ ಸಿದ್ಧಪಡಿಸಲಾಗಿದ್ದ ವಿಶೇಷ ಹಾರವನ್ನು ಕ್ರೇನ್ ಮೂಲಕ ಅರ್ಪಿಸಲಾಯಿತು.
ಮುಖ್ಯಮಂತ್ರಿಯವರ ಪ್ರವಾಸದ ಹಿನ್ನೆಲೆಯಲ್ಲಿ ಹಾರೋಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಬಾಂಬ್ ಸ್ಕ್ವಾಡ್ ಹಾಗೂ ಭದ್ರತಾ ಸಿಬ್ಬಂದಿ ಕಾರ್ಯಕ್ರಮದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ಇಂದು ದಿನಪೂರ್ತಿ ಕನಕಪುರ ಕ್ಷೇತ್ರದಲ್ಲಿ ಡಿಕೆಶಿ ಸಂಚರಿಸಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಕನಕಪುರ ಪಟ್ಟಣದ ಚನ್ನಬಸಪ್ಪ ವೃತ್ತದಲ್ಲಿ ರಾತ್ರಿ 8 ಗಂಟೆಗೆ ಸಮಾರೋಪಗೊಳ್ಳಲಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








