Tuesday, June 16, 2026
spot_imgspot_img
spot_imgspot_img

ಉಪ್ಪಿನಂಗಡಿಯಲ್ಲಿ ಉಬಾರ್ ಮಂಜ ಬೈದ್ಯರ ಪುತ್ಥಳಿ ನಿರ್ಮಾಣಕ್ಕೆ ಬಿಲ್ಲವ ಬ್ರಿಗೇಡ್ ಆಗ್ರಹ-ಶಾಸಕರಿಗೆ ಮನವಿ- ಸ್ಪಂದನೆ

- Advertisement -
- Advertisement -

ಪುತ್ತೂರು: ಉಪ್ಪಿನಂಗಡಿಯ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ರೈತ ನಾಯಕ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅಮರರಾದ ಉಬಾರ್ ಮಂಜ ಬೈದ್ಯ ಅವರ ಪುತ್ಥಳಿಯನ್ನು ಉಪ್ಪಿನಂಗಡಿಯಲ್ಲಿ ನಿರ್ಮಿಸುವಂತೆ ಪುತ್ತೂರು ಬಿಲ್ಲವ ಬ್ರಿಗೇಡ್(ರಿ.) ವತಿಯಿಂದ ಪುತ್ತೂರು ಶಾಸಕ Ashok Kumar Rai ಅವರಿಗೆ ಮನವಿ ಸಲ್ಲಿಸಲಾಗಿದೆ.ಬಿಲ್ಲವ ಸಮಾಜವು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಪುತ್ತೂರಿನಲ್ಲಿ ಬಿಲ್ಲವ ಬ್ರಿಗೇಡ್ ಸ್ಥಾಪನೆಗೊಂಡಿದ್ದು, ಸಮಾಜಮುಖಿ ಚಟುವಟಿಕೆಗಳ ಜೊತೆಗೆ ಸಮಾಜ ವಿರೋಧಿ ಕೃತ್ಯಗಳ ವಿರುದ್ಧ ಹೋರಾಟ ನಡೆಸುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಂಗಳೂರಿನಲ್ಲಿ ವಿವಿಧ ಸೇವಾ ಕಾರ್ಯಗಳ ಮೂಲಕ ಜನಪ್ರಿಯವಾಗಿರುವ ಸದಾನಂದ ಪೂಜಾರಿ ನೇತೃತ್ವದ ಮಂಗಳೂರು ಬಿಲ್ಲವ ಬ್ರಿಗೇಡ್(ರಿ.) ಸಂಘಟನೆಯೊಂದಿಗೆ ಸಂಯೋಜಿತವಾಗಿ ಪುತ್ತೂರು ಬಿಲ್ಲವ ಬ್ರಿಗೇಡ್ ಪಕ್ಷಾತೀತವಾಗಿ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ನಿಯೋಜಿತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸದಸ್ಯತ್ವ ಅಭಿಯಾನವೂ ನಡೆಯುತ್ತಿದ್ದು, ಶೀಘ್ರದಲ್ಲೇ ಸಂಘಟನೆಯ ಅಧಿಕೃತ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಬಿಲ್ಲವ ಬ್ರಿಗೇಡ್‌ನ ಪ್ರಥಮ ಕಾರ್ಯಯೋಜನೆಯ ಭಾಗವಾಗಿ ಉಪ್ಪಿನಂಗಡಿಯಲ್ಲಿ ಉಬಾರ್ ಮಂಜ ಬೈದ್ಯರ ಪುತ್ಥಳಿಯನ್ನು ನಿರ್ಮಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮನವಿಯಲ್ಲಿ ಉಬಾರ್ ಮಂಜ ಬೈದ್ಯರ ಐತಿಹಾಸಿಕ ಹೋರಾಟವನ್ನು ಸ್ಮರಿಸಲಾಗಿದೆ. ಉಪ್ಪಿನಂಗಡಿಯ ಮಂಜಯ್ಯ ಬೈದ್ಯರು ಬ್ರಿಟಿಷರ ವಿರುದ್ಧ ಹೋರಾಡಿದ ಕರಾವಳಿಯ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಕ್ರಾಂತಿಕಾರಿ ರೈತ ನಾಯಕರೂ ಹಾಗೂ ಬ್ರಿಟಿಷ್ ಸರ್ಕಾರದ ಉದ್ಯೋಗಿಯೂ ಆಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿ ಅಮರರಾದ ಅವರು ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದವರಾಗಿದ್ದಾರೆ ಎಂದು ವಿವರಿಸಲಾಗಿದೆ.

ಮಂಗಲ್ ಪಾಂಡೆ ನೇತೃತ್ವದ ಸಿಪಾಯಿ ದಂಗೆಯಾಗಿ ಪ್ರಸಿದ್ಧವಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಸುಮಾರು 20 ವರ್ಷಗಳ ಹಿಂದೆಯೇ, 1837ರಲ್ಲಿ ನಡೆದ ಕಲ್ಯಾಣಪ್ಪನ ಕಾಟುಕಾಯಿ ಹೋರಾಟ ಅಥವಾ ಅಮರ ಸುಳ್ಯ ಸ್ವಾತಂತ್ರ್ಯ ದಂಗೆಯಲ್ಲಿ ಮಂಜ ಬೈದ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ರೈತ ನಾಯಕ ಕೆದಂಬಾಡಿ ರಾಮೇಗೌಡರೊಂದಿಗೆ ಹೆಗಲಿಗೆ ಹೆಗಲು ಸೇರಿಸಿ ಹೋರಾಟ ನಡೆಸಿದ್ದರು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಏಳು ಅಡಿ ಎತ್ತರದ ಅಜಾನುಬಾಹುವಾಗಿದ್ದ ಮಂಜ ಬೈದ್ಯರು ಬ್ರಿಟಿಷರು ರೈತರ ಮೇಲೆ ಹೇರಿದ್ದ ಅನ್ಯಾಯದ ನಗದು ಕಂದಾಯ ನೀತಿಯ ವಿರುದ್ಧ ಹೋರಾಟ ರೂಪಿಸಿದ್ದರು. ಅಂದಿನ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯ ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿದ್ದ ಅವರು ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಹೊಂದಿದ್ದು, ಸ್ವಾತಂತ್ರ್ಯ ಹೋರಾಟದ ಸಿದ್ಧತೆಗಳನ್ನು ನಡೆಸಿ ಹತ್ತಾರು ಹೋರಾಟಗಾರರನ್ನು ಸಂಘಟಿಸಿದ್ದರು ಎಂದು ಹೇಳಲಾಗಿದೆ.1837ರ ಏಪ್ರಿಲ್ 5ರಂದು ಮಂಜ ಬೈದ್ಯರ ನೇತೃತ್ವದ ಕ್ರಾಂತಿಕಾರಿ ಪಡೆ ಮಂಗಳೂರಿನ ಬಾವುಟಗುಡ್ಡೆಯಲ್ಲಿದ್ದ ಬ್ರಿಟಿಷರ ಧ್ವಜವನ್ನು ಕೆಳಗಿಳಿಸಿ, ಕನ್ನಡಿಗರ ಹಾಲೇರಿ ರಾಜವಂಶದ ಧ್ವಜವನ್ನು ಹಾರಿಸಿತ್ತು. ಈ ಐತಿಹಾಸಿಕ ಘಟನೆಯಿಂದಲೇ ಆ ಪ್ರದೇಶಕ್ಕೆ ‘ಬಾವುಟಗುಡ್ಡೆ’ ಎಂಬ ಹೆಸರು ಬಂದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹೋರಾಟದ ಪರಿಣಾಮವಾಗಿ ಸುಮಾರು 13 ದಿನಗಳ ಕಾಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗಿತ್ತು. ನಂತರ ಬ್ರಿಟಿಷ್ ಸೈನ್ಯ ದಂಗೆಯನ್ನು ಹತ್ತಿಕ್ಕಿದಾಗ ಮಂಜ ಬೈದ್ಯರನ್ನು ಬಂಧಿಸಲಾಯಿತು. 1837ರ ಮೇ 27ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಅವರ ಮೃತದೇಹವನ್ನು ತಿಂಗಳುಗಳ ಕಾಲ ಗಲ್ಲುಗಂಬದಲ್ಲೇ ನೇತಾಡುವಂತೆ ಬ್ರಿಟಿಷರು ಆದೇಶಿಸಿದ್ದರೆಂದು ಮನವಿಯಲ್ಲಿ ವಿವರಿಸಲಾಗಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಸಂಘಟಿತ ಹೋರಾಟ ನಡೆಸಿ, ಆರ್ಥಿಕ ಬಲ ತುಂಬಿ, ಬ್ರಿಟಿಷರ ವಿರುದ್ಧ ದಂಗೆಯೆದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಉಬಾರ್ ಮಂಜ ಬೈದ್ಯರ ಹೋರಾಟ, ತ್ಯಾಗ ಮತ್ತು ದೇಶಭಕ್ತಿಯ ಕುರಿತು ಇಂದಿನ ಹಾಗೂ ಮುಂದಿನ ತಲೆಮಾರುಗಳಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಉಪ್ಪಿನಂಗಡಿಯಲ್ಲಿ ಅವರ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಬಿಲ್ಲವ ಬ್ರಿಗೇಡ್ ಮನವಿಯಲ್ಲಿ ಆಗ್ರಹಿಸಿದೆ.

ಮಾನವಿಗೆ ಶಾಸಕರ ಸ್ಪಂದನೆ

ಮನವಿ ಸ್ವೀಕರಿಸಿದ ಶಾಸಕ ಅಶೋಕ್ ಕುಮಾ‌ರ್ ರೈ ಅವರು ಉಬಾ‌ರ್ ಮಂಜ ಬೈದ್ಯರ ದೇಶಭಕ್ತಿ ಮತ್ತು ಹೋರಾಟದ ಮನೋಭಾವವನ್ನು ಸ್ಮರಿಸಿ, ಅವರ ಕೊಡುಗೆ ಮುಂದಿನ ಪೀಳಿಗೆಗೆ ಪರಿಚಯವಾಗುವಂತೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮಗಳ ಕುರಿತು ಚಿಂತನೆ ನಡೆಸುವುದಾಗಿ ಭರವಸೆ ನೀಡಿದರು.

ಈ ವೇಳೆ ಬಿಲ್ಲವ ಬ್ರಿಗೇಡ್‌ನ ಪ್ರಮುಖರು ಹಾಗೂ ಸದಸ್ಯರು ಉಪಸ್ಥಿತರಿದ್ದು, ಸಮಾಜಮುಖಿ ಚಟುವಟಿಕೆಗಳ ಮೂಲಕ ಬಿಲ್ಲವ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಕಾರ್ಯನಿರ್ವಹಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು. ಉಪ್ಪಿನಂಗಡಿಯ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಉಬಾ‌ರ್ ಮಂಜ ಬೈದ್ಯರ ಸ್ಮರಣಾರ್ಥ ಪುತ್ಥಳಿ ನಿರ್ಮಾಣದ ಬೇಡಿಕೆ ಇದೀಗ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ಶೀಘ್ರದಲ್ಲೇ ಮುಂದಿನ ಕ್ರಮಗಳು ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

- Advertisement -

Related news

error: Content is protected !!