




ಬೆಳ್ತಂಗಡಿ: ನ್ಯಾಯಾಲಯದಿಂದ ಒಂದು ತಿಂಗಳ ಕಾರಾಗೃಹ ಶಿಕ್ಷೆಯ ಆದೇಶಕ್ಕೆ ಒಳಗಾದ ಬಳಿಕ ತಲೆ ಮರೆಸಿಕೊಂಡು ಭೂಗತರಾಗಿರುವ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ವಿಠಲ ಗೌಡ ಅವರ ಬಂಧನಕ್ಕೆ ಪೊಲೀಸರು ಜೂ.27ರಂದು ವ್ಯಾಪಕ ಶೋಧ ನಡೆಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡದಂತೆ ನಿರ್ಬಂಧ ವಿಧಿಸಿದ್ದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿದಕ್ಕಾಗಿ ಕು. ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರ ಸಹೋದರ ವಿಠಲ ಗೌಡ ಅವರಿಗೆ ಬೆಂಗಳೂರು ನ್ಯಾಯಾಲಯ ಒಂದು ತಿಂಗಳ ಸಜೆ ವಿಧಿಸಿ ನಾಲ್ಕು ತಿಂಗಳ ಹಿಂದೆ ಆದೇಶ ನೀಡಿತ್ತು.
ಬಳಿಕ ತಲೆ ಮರೆಸಿಕೊಂಡಿರುವ ವಿಠಲ ಗೌಡ ಸ್ಥಳೀಯ ಪೋಲೀಸರಿಗೂ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಠಲ ಗೌಡ ಅವರನ್ನು ಬಂಧಿಸಲು ಜೂ.27ರಂದು ಬೆಂಗಳೂರಿನಿಂದ ಕೋರ್ಟ್ ಅಧಿಕಾರಿಗಳೊಂದಿಗೆ ಆಗಮಿಸಿರುವ ಪೊಲೀಸರು ವಿವಿಧೆಡೆ ಶೋಧ ನಡೆಸಿದ್ದಾರೆ. ವಿಠಲ ಗೌಡ ಅವರ ಮನೆ, ಕುಸುಮಾವತಿಯವರ ಮನೆ ಮಹೇಶ್ ಶೆಟ್ಟಿ ತಿಮರೋಡಿ ಮನೆ ಸಹಿತ ಹಲವೆಡೆ ಶೋಧ ನಡೆಸಿ ವಿಠಲ ಗೌಡರ ಬಂಧನಕ್ಕೆ ಬಲೆ ಬೀಸಲಾಗಿದೆ. ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಠಲ ಗೌಡ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.








