





ಕರಾಕಸ್: ಇತ್ತೀಚೆಗೆ ವೆನೆಜುವೆಲಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಅರ್ಜೆಂಟೀನಾದ ಡಿಫೆಂಡರ್ ಲ್ಯೂಕಸ್ ಟ್ರೆಜೊ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ದುರಂತ ಸಾವಿಗೀಡಾಗಿದ್ದಾರೆ.
ಟ್ರೆಜೊ ಅವರ ಪತ್ನಿ ಯಾನಿನಾ ಮರನೆಲ್ಲಾ, ಅವರ ಮಕ್ಕಳಾದ ಆರನ್ ಮತ್ತು ಐನ್ಹೋವಾ ಟ್ರೆಜೊ ದೇಶದ ಯಾರಾಕುಯ್ ಪ್ರದೇಶದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ವೆನೆಜುವೆಲಾದ ಟಾಪ್-ಫ್ಲೈಟ್ ಕ್ಲಬ್ ಡಿಪೋರ್ಟಿವೊ ಲಾ ಗೈರಾ ದೃಢಪಡಿಸಿದೆ. ಭೂಕಂಪದಲ್ಲಿ ಕುಟುಂಬವಿದ್ದ ಅಪಾರ್ಟ್ಮೆಂಟ್ ಕಟ್ಟಡ ಕುಸಿತವಾಗಿತ್ತು. ನಂತರ ಕುಟುಂಬದ ಸದಸ್ಯರು ಕಾಣೆಯಾಗಿದ್ದಾರೆಂದು ವರದಿಯಾಗಿತ್ತು.
ಟ್ರೆಜೊ ಘಟನಾ ಸ್ಥಳದಲ್ಲಿ ಇರಲಿಲ್ಲ. ಅವರು ಮುಂಬರುವ ಪಂದ್ಯಕ್ಕೆ ತಯಾರಿ ನಡೆಸಲು ತಮ್ಮ ಕ್ಲಬ್ ಮಾರಿಟಿಮೊ ಜೊತೆ ಕರಾಕಸ್‌ನಲ್ಲಿದ್ದರು. ʼಪ್ಲಾಯಾ ಗ್ರಾಂಡೆಯಲ್ಲಿ ನಮ್ಮ ಕಟ್ಟಡ ಕುಸಿದಿದೆ. ನನ್ನ ಕುಟುಂಬದ ಬಗ್ಗೆ ನನಗೆ ಏನೂ ತಿಳಿದಿಲ್ಲ. ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಮತ್ತು ಯಾರಾದರೂ ಅವರನ್ನು ನೋಡಿದರೆ ಈ ಸಂದೇಶವನ್ನು ಹಂಚಿಕೊಳ್ಳಿ. ಅವರು ಅಲ್ಲಿ ಇರಲಿಲ್ಲ ಎಂದು ನಾನು ನಂಬಲು ಬಯಸುತ್ತೇನೆ. ದಯವಿಟ್ಟು ನನ್ನ ಕುಟುಂಬಕ್ಕಾಗಿ ಪ್ರಾರ್ಥಿಸಿʼ ಎಂದು ಟ್ರೆಜೊ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.
ವೆನೆಜುವೆಲಾದಲ್ಲಿ ಸಂಭವಿಸಿದ ಅವಳಿ ಭೂಕಂಪಗಳು ಸುಮಾರು 70 ಲಕ್ಷ ಜನರ ಮೇಲೆ ಪರಿಣಾಮ ಬೀರಿವೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಈ ಭೂಕಂಪಗಳಲ್ಲಿ ಸುಮಾರು 1,000 ಜನರು ಸಾವನ್ನಪ್ಪಿದ್ದು, ಹತ್ತಾರು ಸಾವಿರ ಜನರು ಕಾಣೆಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.








