
ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿದ್ದು, ಈ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಂತೆ ಹೊಸ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣ ಬಹಿರಂಗವಾಗುವ ಮುನ್ನವೇ ಅಕ್ರಮ ನಡೆಯುತ್ತಿರುವ ಬಗ್ಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಮಾಹಿತಿ ಇತ್ತು ಎಂಬ ಆರೋಪ ಕೇಳಿಬಂದಿದೆ.





ಮೂಲಗಳ ಪ್ರಕಾರ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸೂಚನೆಯ ಮೇರೆಗೆ ಟ್ರಸ್ಟ್‌ನ ಪ್ರತಿನಿಧಿಗಳು ಜೂನ್ 5ರಂದು ಪೊಲೀಸರೊಂದಿಗೆ ಆರೋಪಿಗಳಲ್ಲಿ ಒಬ್ಬರಾದ ಅವಿನಾಶ್ ಶುಕ್ಲಾ ಅವರ ನಿವಾಸಕ್ಕೆ ತೆರಳಿದ್ದರು. ಶೋಧ ಕಾರ್ಯಾಚರಣೆಯ ವೇಳೆ ಅಲ್ಲಿಂದ ನಗದು ಹಣ ಪತ್ತೆಯಾಗಿದ್ದು, ಈ ವಿಷಯ ಆಗಲೇ ಪೊಲೀಸರ ಗಮನಕ್ಕೂ ಬಂದಿತ್ತು.ಆದರೆ, ನಗದು ಪತ್ತೆಯಾದ ಬಳಿಕವೂ ಟ್ರಸ್ಟ್‌ನಿಂದ ಪೊಲೀಸರಿಗೆ ಯಾವುದೇ ಅಧಿಕೃತ ದೂರು ಸಲ್ಲಿಕೆಯಾಗಿರಲಿಲ್ಲ ಎನ್ನಲಾಗಿದೆ.
ಜೂನ್ 5ರಂದು ನಡೆದ ಪೊಲೀಸ್ ಕಾರ್ಯಾಚರಣೆಯೂ ಅನೌಪಚಾರಿಕವಾಗಿದ್ದು, ಅದರ ಆಧಾರದ ಮೇಲೆ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.ಜೂನ್ 7ರಂದು ದೇಣಿಗೆ ದುರುಪಯೋಗದ ಆರೋಪ ಸಾರ್ವಜನಿಕವಾಗಿ ಬಹಿರಂಗಗೊಂಡ ಬಳಿಕ ಪ್ರಕರಣ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಘಟನೆಯ ಸಮಗ್ರ ತನಿಖೆಗೆ ವಿವಿಧ ವಲಯಗಳಿಂದ ಒತ್ತಾಯವೂ ವ್ಯಕ್ತವಾಗಿತ್ತು.








