


ಡೆಹ್ರಾಡೂನ್: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದ ಬೆನ್ನಲ್ಲೇ ಬದರಿನಾಥ ಧಾಮದಲ್ಲೂ ಕಾಣಿಕೆ ದುರುಪಯೋಗವಾಗಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದು, ತನಿಖೆಗೆ ಆದೇಶಿಸಲಾಗಿದೆ.
ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೇಣಿಗೆ ದುರುಪಯೋಗದ ಆರೋಪಗಳನ್ನು ದೇವಸ್ಥಾನ ಸಮಿತಿಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ತನಿಖಾ ಸಮಿತಿಯೊಂದನ್ನು ರಚಿಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇದರ ನಡುವೆ ಆರೋಪ ಎದುರಿಸುತ್ತಿರುವವರು ತಮ್ಮ ʻವೈಯಕ್ತಿಕ ಕಾರ್ಯದರ್ಶಿʼ ಎಂದು ಹೇಳುತ್ತಿರುವುದನ್ನು ತಳ್ಳಿಹಾಕಿದ್ದಾರೆ. ಆದರೆ ಆರೋಪ ಎದುರಿಸುತ್ತಿರುವ ವ್ಯಕ್ತಿ ನನ್ನ ವೈಯಕ್ತಿಕ ಕಾರ್ಯದರ್ಶಿಯಲ್ಲ. ಆತ ದೇವಸ್ಥಾನ ಸಮಿತಿಯ ಸಾಮಾನ್ಯ ನೌಕರ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬಿಕೆಟಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ್ ಸಿಂಗ್ ರಂಗದ್ ಅವರು, ತನಿಖೆಯಲ್ಲಿ ಆರೋಪಗಳು ಸಾಬೀತಾದರೆ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಲಭ್ಯವಿರುವ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಂಬಂಧಪಟ್ಟವರ ಹೇಳಿಕೆಗಳ ಆಧಾರದ ಮೇಲೆ ತನಿಖಾ ಸಮಿತಿಯು ವರದಿಯನ್ನು ಸಲ್ಲಿಸಲಿದೆ ಎಂಬುದಾಗಿ ತಿಳಿಸಿದ್ದಾರೆ.
ಯಾವುದೇ ಅಕ್ರಮಗಳು ಬೆಳಕಿಗೆ ಬಂದಲ್ಲಿ, ತಪ್ಪಿತಸ್ಥರ ವಿರುದ್ಧ ‘ಶ್ರೀ ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ ಕಾಯ್ದೆ, 1939’ ಮತ್ತು ನೌಕರರ ನಡವಳಿಕೆ ನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ತನಿಖೆ ಮುಗಿಯುವವರೆಗೆ ಸಾರ್ವಜನಿಕರು ದಾರಿ ತಪ್ಪಿಸುವ ಮಾಹಿತಿಯನ್ನು ಹರಡಬಾರದು ಎಂದು ಮನವಿ ಮಾಡಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.








