Sunday, July 5, 2026
spot_imgspot_img
spot_imgspot_img

ಕಾಲಿನ ಮೂಳೆ ಮುರಿತಕ್ಕೆ ಚಿಕಿತ್ಸೆ ವೇಳೆ 18 ವರ್ಷದ ಯುವಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ತನಿಖೆಗೆ ಸಿಎಂ ಆದೇಶ

- Advertisement -
- Advertisement -

ರಾಂಚಿ: ಕಾಲಿನ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 18 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ರಾಂಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಈ ಘಟನೆಗೆ ವೈದ್ಯಕೀಯ ನಿರ್ಲಕ್ಷ್ಯಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೆ, ಮೂಳೆ ಮುರಿತದ ಚಿಕಿತ್ಸೆಗಾಗಿ 22 ಲಕ್ಷ ರೂ.ನಷ್ಟು ದುಬಾರಿ ಶುಲ್ಕ ವಿಧಿಸಲಾಗಿದೆ ಎಂದೂ ಅವರು ದೂರಿದ್ದಾರೆ.ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಹೇಮಂತ್ ಸೊರೇನ್ ಶನಿವಾರ ತನಿಖೆಗೆ ಆದೇಶಿಸಿದ್ದಾರೆ.ಲತೇಹಾರ್ ನಿವಾಸಿ ರಾಜು ಕುಮಾರ್ ರಂಜನ್ ಎಂಬ ಯುವಕನು ಮೇ 24ರಂದು ನಡೆದಿದ್ದ ರಸ್ತೆ ಅಪಘಾತದಲ್ಲಿ ಮೂಳೆ ಮುರಿತಕ್ಕೆ ಗುರಿಯಾಗಿದ್ದ. ಆತನನ್ನು ರಾಂಚಿಯಲ್ಲಿನ ರಾಜ್ ಆಸ್ಪತ್ರೆ ಎಂಬ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಆತ ಬುಧವಾರ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯುವಕನ ಗಾಯಕ್ಕೆ ಆಸ್ಪತ್ರೆಯ ಸಿಬ್ಬಂದಿಗಳು ನಿಯಮಿತವಾಗಿ ಡ್ರೆಸ್ಸಿಂಗ್ ಮಾಡದೆ ಇದ್ದುದರಿಂದ, ಆತ ಗಂಭೀರ ಸೋಂಕಿಗೆ ಗುರಿಯಾಗಿದ್ದ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ದಿನಗಳೆದಂತೆ ಸೋಂಕು ತೀವ್ರಗೊಂಡು, ಆತನ ಆರೋಗ್ಯ ಸ್ಥಿತಿ ಗಂಭೀರವಾಯಿತು. ಬಳಿಕ ಆತನನ್ನು ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಜುಲೈ 1ರಂದು ಮೃತಪಟ್ಟಿದ್ದಾನೆ ಎಂದೂ ಅವರು ದೂರಿದ್ದಾರೆ. ಈ ಸಂಬಂಧ ಕುಟುಂಬದ ಸದಸ್ಯರು ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಆಸ್ಪತ್ರೆಯ ಅಧಿಕಾರಿಗಳು ಮೃತ ಯುವಕನ ಕುಟುಂಬದ ಸದಸ್ಯರಿಗೆ 22 ಲಕ್ಷ ರೂ. ಶುಲ್ಕದ ಬಿಲ್ ಅನ್ನು ಹಸ್ತಾಂತರಿಸಿದಾಗ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ, ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯಕೀಯ ನಿರ್ಲಕ್ಷ್ಯ ತೋರಿದೆ ಹಾಗೂ ದುಬಾರಿ ಶುಲ್ಕ ವಿಧಿಸಿದೆ ಎಂದು ಆರೋಪಿಸಿ ಮೃತ ಯುವಕನ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಾಲಿನ ಗಾಯ ಅದು ಹೇಗೆ ಜೀವಾಪಾಯಕ್ಕೆ ಕಾರಣವಾಯಿತು ಎಂದೂ ಕುಟುಂಬದ ಸದಸ್ಯರು ಪ್ರಶ್ನಿಸಿದ್ದಾರೆ.ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿರುವ ರಾಜ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿರೇಂದ್ರ ಕುಮಾರ್, “ಅಪಘಾತದಲ್ಲಿ ಯುವಕನ ತಲೆ, ಎದೆ, ಬೆನ್ನುಮೂಳೆ ಹಾಗೂ ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಆತ ಚಿಕಿತ್ಸೆಯುದ್ದಕ್ಕೂ ಗಂಭೀರ ಸ್ಥಿತಿಯಲ್ಲೇ ಇದ್ದ. ಯುವಕನ ಕಾಲು ನಜ್ಜುಗುಜ್ಜಾಗಿದ್ದುದರಿಂದ, ಆತನ ಕಾಲು ಕತ್ತರಿಸಲು ಆಸ್ಪತ್ರೆ ಶಿಫಾರಸು ಮಾಡಿತ್ತು. ಆದರೆ, ಯುವಕನ ಕುಟುಂಬದ ಸದಸ್ಯರು ಅದಕ್ಕೆ ತಮ್ಮ ಸಮ್ಮತಿ ನೀಡಲಿಲ್ಲ” ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಹೇಮಂತ್ ಸೊರೇನ್, ಈ ಘಟನೆಯ ಕುರಿತು ತನಿಖೆ ನಡೆಸುವಂತೆ ಹಾಗೂ ಈ ಘಟನೆಗೆ ಹೊಣೆಗಾರರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಂಚಿಯ ಉಪ ಪೊಲೀಸ್‌ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ

- Advertisement -

Related news

error: Content is protected !!