Sunday, July 12, 2026
spot_imgspot_img
spot_imgspot_img

ಸವಣಾಲು | ನದಿ ದಾಟದಂತೆ ಬ್ಯಾನರ್; ಹಿತ್ತಿಲಪೇಲ ಆದಿವಾಸಿಗಳಿಗೆ ದಿಗ್ಬಂಧನ ವಿಧಿಸಿದ ಆಡಳಿತ: ಆರೋಪ

- Advertisement -
- Advertisement -

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಎಂಬಲ್ಲಿ ಕಳೆದ ವರ್ಷ ಜೂನ್ 15ರಂದು ದ್ವಿಚಕ್ರ ವಾಹನ ಸಮೇತ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಪ್ರದೇಶದಲ್ಲಿ ಇದೀಗ “ನದಿ ತುಂಬಿ ಹರಿಯುತ್ತದೆ, ನದಿ ದಾಟುವುದು ನಿಷೇಧಿಸಲಾಗಿದೆ” ಎಂಬ ಬ್ಯಾನರ್ ಅಳವಡಿಸುವ ಮೂಲಕ ಮೂಲನಿವಾಸಿಗಳಿಗೆ ದಿಗ್ಬಂಧನ ವಿಧಿಸಲಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಘಟಕದ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ್ ಆರೋಪಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸವಣಾಲು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲದಲ್ಲಿ 9 ಆದಿವಾಸಿ ಮಲೆಕುಡಿಯ ಕುಟುಂಬಗಳು ಎರಡು ಶತಮಾನಗಳಿಂದ ವಾಸಿಸುತ್ತಿವೆ. ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಜೀವಿಸುತ್ತಿರುವ ಈ ಕುಟುಂಬಗಳು ವಿದ್ಯುತ್, ರಸ್ತೆ, ಸೇತುವೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಸ್ವಾತಂತ್ರ್ಯ ಲಭಿಸಿ 79 ವರ್ಷಗಳಾದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾದ ಆಡಳಿತ ವ್ಯವಸ್ಥೆ ಇದೀಗ ಸಂಪರ್ಕ ಕೊಂಡಿಯಾಗಿರುವ ನದಿಯನ್ನೇ ದಾಟಬಾರದು ಎಂದು ಬ್ಯಾನರ್ ಅಳವಡಿಸುವ ಮೂಲಕ ಆದಿವಾಸಿಗಳಿಗೆ ದಿಗ್ಬಂಧನ ವಿಧಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.ಕಳೆದ ವರ್ಷ ಯುವಕರು ನದಿಯ ರಭಸಕ್ಕೆ ದ್ವಿಚಕ್ರ ವಾಹನ ಸಮೇತ ಕೊಚ್ಚಿಕೊಂಡು ಹೋಗಿ ಅದೃಷ್ಟವಶಾತ್ ಬದುಕುಳಿದಿದ್ದರು.

ಆ ಸಂದರ್ಭದಲ್ಲಿ ತಾಲೂಕು ಹಾಗೂ ಜಿಲ್ಲಾ ಆಡಳಿತದ ಅಧಿಕಾರಿಗಳು, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಸೇರಿದಂತೆ ಹಲವರು ಹಿತ್ತಿಲಪೇಲಕ್ಕೆ ಭೇಟಿ ನೀಡಿದ್ದರು.

ಸ್ಥಳೀಯ ನಿವಾಸಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ಕನಿಷ್ಠ ಸಂಪರ್ಕಕ್ಕಾಗಿ ಒಂದು ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ತುರ್ತಾಗಿ ಸೇತುವೆ ನಿರ್ಮಿಸುವ ಬಗ್ಗೆ ಭರವಸೆ ನೀಡಲಾಗಿತ್ತು. ಆದರೆ ಇಲ್ಲಿಯ ತನಕವೂ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ನಡೆದಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀಡಿದ ಭರವಸೆಗಳು ಈಡೇರಿಲ್ಲ ಎಂದು ಅವರು ದೂರಿದ್ದಾರೆ. ಇದೀಗ ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮೂಲನಿವಾಸಿಗಳು ನದಿಯನ್ನು ದಾಟಿಯೇ ಬರಬೇಕಾಗಿದೆ. ಕೂಲಿ ಕೆಲಸಕ್ಕೆ ಹೋಗಲು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ತರಲು ಇದೇ ಏಕೈಕ ಮಾರ್ಗವಾಗಿದೆ.

ಸೇತುವೆ ನಿರ್ಮಿಸಲು ಮುಂದಾಗದ ಅಧಿಕಾರಿಗಳು ಇದೀಗ ನದಿ ದಾಟಬಾರದು ಎಂಬ ಬ್ಯಾನರ್ ಅಳವಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಆದಿವಾಸಿ ಸಮುದಾಯವನ್ನು ಜನಪ್ರತಿನಿಧಿಗಳು ಕೇವಲ ಓಟ್ ಬ್ಯಾಂಕ್ ಆಗಿ ದುರುಪಯೋಗ ಮಾಡಿಕೊಂಡಿದ್ದಾರೆ. ಆದಿವಾಸಿಗಳ ಯಾವುದೇ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ. ಅಧಿಕಾರಿಗಳು ನಮ್ಮ ಸಮುದಾಯಕ್ಕೆ ಸುಳ್ಳು ಭರವಸೆ ನೀಡಿ ಮೋಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಮಲೆಕುಡಿಯ ಸಮುದಾಯವನ್ನು ಗೊಂಬೆಯಾಟದಂತೆ ಬಳಸುತ್ತಿದ್ದಾರೆ.

ನದಿ ದಾಟಬಾರದು ಎಂದು ಸೂಚನಾ ಫಲಕ ಹಾಕಿರುವ ಅಧಿಕಾರಿಗಳು ಈ ಆದಿವಾಸಿ ಕುಟುಂಬಗಳು ಹೇಗೆ ಬದುಕಬೇಕು ಎಂಬುದನ್ನು ಹೇಳಬೇಕಾಗಿದೆ. ಅವರ ದಿನನಿತ್ಯದ ಅಗತ್ಯಗಳಿಗಾಗಿ ಸರ್ಕಾರ ಯಾವ ಕ್ರಮ ಕೈಗೊಳ್ಳದೆ ಹೀಗೆ ದಿಗ್ಬಂಧನ ವಿಧಿಸುವುದು ಎಷ್ಟು ಸರಿ? ಇಂತಹ ಮೋಸದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನೇ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

- Advertisement -

Related news

error: Content is protected !!