Monday, July 27, 2026
spot_imgspot_img
spot_imgspot_img

12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣಕ್ಕೆ ತೀರ್ಪು: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

- Advertisement -
- Advertisement -

ಮಂಗಳೂರು, ಜು. 27: 2014ರಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳಿಯಾ ಗಣೇಶ್ ಶಿಪ್ಪಿಂಗ್ ಗೋಡೌನ್ ಸಮೀಪ ನಡೆದ ಗಂಗಾಧರ ಪಾಂಗಾಳ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿದಂತೆ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿರುವ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

2014ರ ಮೇ 15ರಂದು ಗಂಗಾಧರ ಪಾಂಗಾಳ ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳಾದ ಸತೀಶ್ ಬೈಕಂಪಾಡಿ, ಪುಷ್ಪರಾಜ್, ಹರೀಶ್ ಬೈಕಂಪಾಡಿ ಹಾಗೂ ಭಾಸ್ಕರ್ ಬೈಕಂಪಾಡಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಪೂರ್ವನಿಯೋಜಿತ ಸಂಚು ರೂಪಿಸಿ ಬೊಲೆರೋ ವಾಹನದಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೊಲೆ ಮಾಡಿದ್ದರು. ಬಳಿಕ ಘಟನೆಯನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದರು. ಆದರೆ ತನಿಖೆಯಲ್ಲಿ ಇದು ಕೊಲೆ ಪ್ರಕರಣ ಎಂಬುದು ಬಹಿರಂಗವಾಗಿದ್ದು, ಪಣಂಬೂರು ಠಾಣೆಯಲ್ಲಿ IPC ಕಲಂ 302, 201, 109, 120(B) ಹಾಗೂ 34ರಡಿ ಪ್ರಕರಣ ದಾಖಲಾಗಿತ್ತು.

ತನಿಖೆಯಲ್ಲಿ, ಮೊಗವೀರ ಮಹಾಸಭೆಯ ಸದಸ್ಯತ್ವದಿಂದ ಸತೀಶ್ ಬೈಕಂಪಾಡಿಯನ್ನು ಅಮಾನತುಗೊಳಿಸಲು ಗಂಗಾಧರ ಪಾಂಗಾಳ ಕಾರಣಕರ್ತರು ಎಂಬ ದ್ವೇಷದಿಂದ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು.ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ನಾಲ್ವರು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದರು.

ಆರೋಪಿಗಳಾದ ಸತೀಶ್ ಬೈಕಂಪಾಡಿ (57), ಹರೀಶ್ ಬೈಕಂಪಾಡಿ (61) ಹಾಗೂ ಭಾಸ್ಕರ್ ಬೈಕಂಪಾಡಿ (63) ಅವರಿಗೆ IPC ಕಲಂ 302, 120(B), 109 ಹಾಗೂ 34ರಡಿ ಜೀವಾವಧಿ ಶಿಕ್ಷೆ ಮತ್ತು ತಲಾ ₹15,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಿದೆ.

ಇನ್ನೊಬ್ಬ ಆರೋಪಿ ಪುಷ್ಪರಾಜ್ (47) ಗೆ IPC ಕಲಂ 302, 120(B) ಹಾಗೂ 34ರಡಿ ಜೀವಾವಧಿ ಶಿಕ್ಷೆ ಮತ್ತು ₹15,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಒಂದು ವರ್ಷದ ಹೆಚ್ಚುವರಿ ಸಾದಾ ಶಿಕ್ಷೆ ವಿಧಿಸಲಾಗಿದೆ.ಇದೇ ವೇಳೆ IPC ಕಲಂ 201 ಜೊತೆಗೆ 34ರಡಿ ನಾಲ್ವರು ಆರೋಪಿಗಳಿಗೆ ಎರಡು ವರ್ಷದ ಸಾದಾ ಶಿಕ್ಷೆ ಹಾಗೂ ತಲಾ ₹1,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಒಂದು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಿದೆ.ನ್ಯಾಯಾಲಯವು ಒಟ್ಟು ₹60,000 ದಂಡದ ಪೈಕಿ ₹50,000ನ್ನು ಮೃತ ಗಂಗಾಧರ ಪಾಂಗಾಳ ಅವರ ಮಗಳಿಗೆ ಪರಿಹಾರವಾಗಿ ಹಾಗೂ ₹10,000ನ್ನು ಸರ್ಕಾರಕ್ಕೆ ಪಾವತಿಸಲು ಆದೇಶಿಸಿದೆ. ಪ್ರಕರಣದಲ್ಲಿ ಬಳಸಿದ್ದ ಬೊಲೆರೋ, ರಿಟ್ಜ್ ಹಾಗೂ ಮಾರುತಿ ಕಾರುಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಆದೇಶಿಸಲಾಗಿದೆ.

ನ್ಯಾಯಾಲಯದ ಆದೇಶದಂತೆ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪ್ರಕರಣದ ತನಿಖೆಯನ್ನು ಅಂದಿನ ಪಣಂಬೂರು ಠಾಣೆಯ ಪೊಲೀಸ್ ನಿರೀಕ್ಷಕರಾದ ಎನ್.ಆರ್. ಮುಕ್ರಿ, ಭಾಸ್ಕರ್ ರೈ ಹಾಗೂ ರವೀಶ್ ನಾಯಕ್ ಭಾಗಶಃ ನಡೆಸಿದ್ದು, ಲೋಕೇಶ್ ಎ.ಸಿ. ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ ವಾದ ಮಂಡಿಸಿದ್ದರು.

- Advertisement -

Related news

error: Content is protected !!