


ಚಿಕ್ಕಬಳ್ಳಾಪುರ: ಮನೆಯಲ್ಲಿ ಊಟ ಮುಗಿಸಿ ತಾಯಿಯಿಂದ ಹಣ ಪಡೆದು 10 ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಹೊರಟಿದ್ದ ಯುವಕ, ಕೆಲವೇ ಗಂಟೆಗಳಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮೃತನನ್ನು ನಗರದ ಟಿ.ಜಿ. ಟ್ಯಾಂಕ್ ರಸ್ತೆ ನಿವಾಸಿ ಇಸ್ಮಾಯಿಲ್ ಪಾಶಾ ಅಲಿಯಾಸ್ ಹಬೀಬ್ ಎಂದು ಗುರುತಿಸಲಾಗಿದೆ. ತಲೆಯ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ರೀತಿ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಘಟನೆ ಚಿಕ್ಕಬಳ್ಳಾಪುರ ನಗರದ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ಇಂದು ಬೆಳಗ್ಗೆ ಸ್ಥಳೀಯರಿಗೆ ಯುವಕನ ಶವ ಕಾಣಿಸಿಕೊಂಡಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳು ಹಿಂಬದಿಯಿಂದ ತಲೆಯ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಹಬೀಬ್ ಪೇಂಟರ್ ಕೆಲಸ ಮಾಡುತ್ತಿದ್ದ. ಆತನಿಗೆ ಮದ್ಯದ ಚಟವಿತ್ತು. ಘಟನೆ ನಡೆದ ರಾತ್ರಿ ತಾಯಿಯಿಂದ ಹಣ ಪಡೆದು ಮನೆಯಿಂದ ಹೊರಟಿದ್ದ ಆತ, ಮತ್ತೆ ಮನೆಗೆ ವಾಪಸ್ ಬರಲಿಲ್ಲ. ಬೆಳಗ್ಗೆ ಆತನ ಶವ ಪತ್ತೆಯಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಹಬೀಬ್ ತನ್ನ ಸ್ನೇಹಿತನೊಂದಿಗೆ ಅಂಗಡಿಯೊಂದರ ಮುಂದೆ ಸಿಗರೇಟ್ ಸೇದುತ್ತಿರುವ ದೃಶ್ಯ ಸೆರೆಯಾಗಿದೆ. ಇದೀಗ ಆ ಸ್ನೇಹಿತನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಹತ್ಯೆಗೆ ವೈಯಕ್ತಿಕ ದ್ವೇಷ, ಹಣಕಾಸಿನ ವಿಚಾರ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








