


ನವದೆಹಲಿ: ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡದೇ ಇದ್ದಿದ್ದರೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 135 ಡಾಲರ್‌ಗೆ ಏರಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ ಸುಮಾರು 125 ರೂ. ತಲುಪುತ್ತಿತ್ತು ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ಸರ್ಕಾರದ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ಸಚಿವಾಲಯ, ದೇಶೀಯವಾಗಿ ಪೂರ್ವನಿಗದಿತ ದರದಲ್ಲಿ ಖರೀದಿಸಿದ ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಶೇ.20ರಷ್ಟು ಮಿಶ್ರಣ ಮಾಡಿದ್ದರಿಂದ ಗ್ರಾಹಕರು ಪ್ರತಿ ಲೀಟರ್‌ಗೆ 94.77 ರೂ. ದರದಲ್ಲೇ ಪೆಟ್ರೋಲ್ ಖರೀದಿಸಲು ಸಾಧ್ಯವಾಯಿತು ಎಂದು ತಿಳಿಸಿದೆ.
ಸಚಿವಾಲಯದ ಪ್ರಕಾರ, ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಉಂಟಾಗಬಹುದಾದ ಭಾರೀ ಹೊರೆಗಳಿಂದ ಗ್ರಾಹಕರನ್ನು ರಕ್ಷಿಸಿದ್ದು E20 ಪೆಟ್ರೋಲ್. ಸಂಕಷ್ಟದ ಅವಧಿಯಲ್ಲಿ ಪ್ರತಿ ಲೀಟರ್‌ಗೆ ಸುಮಾರು 30 ರೂ.ವರೆಗೆ ಉಳಿತಾಯವಾಗಲು ಕಾರಣವಾಗಿದೆ.
ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾದ ಬಳಿಕ ಸುಮಾರು 75 ದಿನಗಳ ಕಾಲ ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತಗಳಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳನ್ನ ಸ್ಥಿರವಾಗಿಯೇ ಉಳಿಸಿತ್ತು. ನಂತರ ಮೇ ತಿಂಗಳಲ್ಲಿ ಲೀಟರ್‌ಗೆ 7.50 ರೂ. ಹೆಚ್ಚಳ ಮಾಡಿತು. ಪ್ರಸ್ತುತ ದೆಹಲಿಯಲ್ಲಿ E20(91 ಆಕ್ಟೇನ್) ಪೆಟ್ರೋಲ್ ದರ ಲೀಟರ್‌ಗೆ 102.12 ರೂ. ಇದ್ದು, 100 ಆಕ್ಟೇನ್ ಪೆಟ್ರೋಲ್ ದರ 169 ರೂ. ಆಗಿರುವುದಾಗಿ ತಿಳಿದುಬಂದಿದೆ.







