Saturday, August 8, 2026
spot_imgspot_img
spot_imgspot_img

ಭೂಸ್ವಾಧೀನ ಪರಿಹಾರ ಘೋಷಣೆಗೂ ಮುನ್ನ ಒಕ್ಕಲೆಬ್ಬಿಸುವುದಿಲ್ಲ: ಹೈಕೋರ್ಟ್‌ಗೆ ಸರ್ಕಾರ

- Advertisement -
- Advertisement -

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ವ್ಯಾಪ್ತಿಯಲ್ಲಿನ ಉದ್ದೇಶಿತ ಬಿಡದಿ ಸಮಗ್ರ ಟೌನ್‌ಶಿಪ್ ಯೋಜನೆಯಡಿ ಈತನಕ ಭೂಸ್ವಾಧೀನಕ್ಕೆ ಪರಿಹಾರ ಘೋಷಣೆ ಮಾಡಿ ತೀರ್ಪು ಹೊರಡಿಸದೇ ಇರುವ ಹಿನ್ನೆಲೆಯಲ್ಲಿ ಅರ್ಜಿದಾರ ಭೂ ಮಾಲೀಕರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಟೌನ್‌ಶಿಪ್ ಯೋಜನೆ ಪ್ರಶ್ನಿಸಿ ಬಿಡದಿ ಹೋಬಳಿಯ ತಾಯಪ್ಪನದೊಡ್ಡಿಯ ಎಸ್.ಎಚ್‌. ಹರಿಪ್ರಸಾದ್ ಸೇರಿ 18 ಕೃಷಿಕರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ (ಆಗಸ್ಟ್ 7) ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎ.ವಿ. ನಿಶಾಂತ್, ಯೋಜನೆಯ ಭೂ ಸ್ವಾಧೀನ ವೆಚ್ಚ 18 ಸಾವಿರ ಕೋಟಿ ರೂ. ಗಳಷ್ಟಿದ್ದರೆ ರಾಜ್ಯ ಸರಕಾರ ಈ ಯೋಜನೆಗೆ ಸುಮಾರು 33 ಸಾವಿರ ಕೋಟಿ ರೂ. ಗುರಿ ಇರಿಸಿದೆ. ಇದರಲ್ಲಿ ಸಾರ್ವಜನಿಕ ಉದ್ದೇಶದ ಇರಾದೆಯಿಲ್ಲ ಎಂದು ಆಕ್ಷೇಪಿಸಿದರು.

ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಈತನಕ ಯಾವುದೇ ಪರಿಹಾರ ನಿರ್ಧಾರ ಮಾಡಿ ತೀರ್ಪು ಹೊರಡಿಸದೇ ಇರುವ ಕಾರಣ ಭೂ ಮಾಲೀಕರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ರಾಜ್ಯ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಟೌನ್‌ಶಿಪ್ ಯೋಜನೆಯ ಭೂ ಸ್ವಾಧೀನ ಅಧಿಕಾರಿ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಸೇರಿ ಇತರ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿತು.

- Advertisement -

Related news

error: Content is protected !!