



ಕಠ್ಮಂಡು: ನೇಪಾಳದ ಭೀಕರ ಪ್ರವಾಹದಲ್ಲಿ ನೂರಾರು ಮಂದಿ ಮೃತಪಟ್ಟಿರುವ ಬೆನ್ನಲ್ಲೇ, ಮೂರು ದಿನಗಳ ಕಾಲ ಮಣ್ಣು ಹಾಗೂ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯೊಬ್ಬಳನ್ನು ರಕ್ಷಣಾ ಸಿಬ್ಬಂದಿ ಜೀವಂತವಾಗಿ ರಕ್ಷಿಸಿದ್ದಾರೆ.
ರಸುವಾ ಜಿಲ್ಲೆಯ ಟಿಮುರೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭೋಟೆ ಕೋಶಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಿಂದ ಸಿಲುಕಿರುವವರಿಗಾಗಿ ಶೋಧ ನಡೆಸುತ್ತಿದ್ದ ನೇಪಾಳ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗೆ ಅವಶೇಷಗಳ ಅಡಿಯಿಂದ ಬಾಲಕಿ ಅಳುವ ಧ್ವನಿ ಕೇಳಿಸಿದೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ರಕ್ಷಣಾ ಸಿಬ್ಬಂದಿ ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸಿ ಬಾಲಕಿಯನ್ನು ಜೀವಂತವಾಗಿ ಹೊರತೆಗೆದಿದ್ದಾರೆ. ಸುಮಾರು ಮೂರು ದಿನಗಳ ಕಾಲ ಮಣ್ಣಿನಡಿ ಸಿಲುಕಿದ್ದರೂ ಬಾಲಕಿ ಬದುಕುಳಿದಿರುವುದು ಅಚ್ಚರಿ ಮೂಡಿಸಿದೆ.
ಬಾಲಕಿಯನ್ನು ರಕ್ಷಿಸಿದ ಬಳಿಕ ಟಿಮುರೆಯಲ್ಲಿರುವ ಸಶಸ್ತ್ರ ಪೊಲೀಸ್ ಪಡೆಯ ಗಡಿ ಠಾಣೆಗೆ ಕರೆದೊಯ್ಯಲಾಯಿತು. ಆದರೆ ಆಕೆಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಠ್ಮಂಡುವಿಗೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡರು. ಶುಕ್ರವಾರವೇ ಬಾಲಕಿಯನ್ನು ವಿಮಾನದ ಮೂಲಕ ಕಠ್ಮಂಡುವಿಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ ಕತ್ತಲು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಏರ್ಲಿಫ್ಟ್ ಸಾಧ್ಯವಾಗಲಿಲ್ಲ. ಬಳಿಕ ಶನಿವಾರ ಮಧ್ಯಾಹ್ನ ಬಾಲಕಿಯನ್ನು ವಿಮಾನದ ಮೂಲಕ ಕಠ್ಮಂಡುವಿಗೆ ಕರೆತರಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದುರಂತದಲ್ಲಿ ಕನಿಷ್ಠ 669 ಮಂದಿ ಮೃತಪಟ್ಟಿದ್ದಾರೆ. ಟಿಬೆಟ್ನಲ್ಲೂ ಏಳು ಮಂದಿ ಮೃತಪಟ್ಟಿದ್ದಾರೆ. ಪ್ರವಾಹದ ರಭಸಕ್ಕೆ ಮನೆಗಳು, ಸೇತುವೆಗಳು, ರಸ್ತೆಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳು ಕೊಚ್ಚಿಹೋಗಿವೆ. ನೇಪಾಳ ಮತ್ತು ಟಿಬೆಟ್ನಲ್ಲಿ ಸುಮಾರು 3,000 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಈ ಪೈಕಿ ನೇಪಾಳದಲ್ಲಿ ಸುಮಾರು 2,426 ಮಂದಿ ಹಾಗೂ ಟಿಬೆಟ್ನ ಗ್ಯಿರಾಂಗ್ ಕೌಂಟಿಯಲ್ಲಿ 554 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾಗಿರುವವರಲ್ಲಿ ಕನಿಷ್ಠ 540 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ. ಇವರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಹಲವು ಭಾರತೀಯ ಯಾತ್ರಿಕರೂ ಸೇರಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿದ್ದ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳು ಮಳೆ, ದಟ್ಟ ಮಂಜು ಹಾಗೂ ನೇಪಾಳ-ಟಿಬೆಟ್ ಗಡಿಯ ಬಳಿ ಪ್ರವಾಹದಿಂದ ನಿರ್ಮಾಣವಾಗಿರುವ ಸರೋವರ ಉಕ್ಕಿ ಹರಿಯುವ ಆತಂಕದಿಂದ ಕೆಲಕಾಲ ಸ್ಥಗಿತಗೊಂಡಿದ್ದವು. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಶನಿವಾರದಿಂದ ಮತ್ತೆ ದೊಡ್ಡ ಪ್ರಮಾಣದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.








