
ಪುತ್ತೂರು: ದರ್ಬೆಯಲ್ಲಿ ನಡೆದ ಸಣ್ಣ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಿಸಲು ಹೊರಪ್ರದೇಶದಿಂದ ಬಂದ ಜಗದೀಶ್ ಕಾರಂತ್ ಹಾಗೂ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪ್ರಯತ್ನ ಮಾಡುತ್ತಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ಮಾನವಬಂಧುತ್ವ ವೇದಿಕೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ದರ್ಬೆಯಲ್ಲಿ ಅಂಗಡಿ ಮಾಲಕರು ಹಾಗೂ ಗಿರಾಕಿಗಳ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ಪುತ್ತೂರಿಗೆ ಭೇಟಿ ನೀಡಿದ ಈ ಇಬ್ಬರು ಮಾದ್ಯಮಗಳಲ್ಲಿ ಕೋಮುದ್ವೇಷ ಪ್ರೇರಿತ ಮಾತುಗಳನ್ನು ಆಡಿದ್ದಾರೆ. ಮುಸ್ಲಿಂ ಸಮುದಾದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ದೇಶ ವಿಭಜನೆ ಮಾಡುವ ಹುನ್ನಾರ, ಭಯೋತ್ಪಾದಕ ಮುಸ್ಲಿಂ ಎಂಬಿತ್ಯಾದಿ ಪದಗಳನ್ನುಬಳಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತಂದಿದ್ದಾರೆ. ಸಮುದಾಯಗಳ ನಡುವೆ ವೈರತ್ಯ ಉಂಟು ಮಾಡುವುದು ಶಿಕ್ಷಾರ್ಹವಾಗಿರುತ್ತದೆ. ಹಾಗಾಗಿ ಸಮಾಜದಲ್ಲಿ ಪರಸ್ಪರ ವೈರತ್ವ ಮೂಡಿಸುವ ಇವರ ಹೇಳಿಕೆಗಳಿಂದ ಅಶಾಂತಿಯ ಸೃಷ್ಟಿಯಾಗುತ್ತದೆ. ಅವರ ದ್ವೇಷ ಪೂರಿತ ಹೇಳಿಕೆಗಳನ್ನು ತಡೆಯಲು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ಡಿವೈಎಸ್ಪಿ ಹಾಗೂ ಪುತ್ತೂರು ಠಾಣಾಧಿಕಾರಿಗಳಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.ಪುತ್ತೂರಿನಲ್ಲಿ ಆ.31ರಂದು ಸಂಘಪರಿವಾರ ನಡೆಸಲು ಉದ್ದೇಶಿಸಿರುವ ‘ಪುತ್ತೂರು ಚಲೋ’ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಪುತ್ತೂರು ಮಾನವಬಂಧುತ್ವ ವೇದಿಕೆ ಪುತ್ತೂರು ಡಿವೈಎಸ್ಪಿ ಅವರಿಗೆ ಮನವಿ ನೀಡಿದೆ.
ಈ ಕಾರ್ಯಕ್ರಮದ ಆಯೋಜನೆ ಕೋಮುಗಲಭೆ ನಡೆಸುವ ದುರುದ್ದೇಶಪೂರಿತವಾಗಿದೆ. ಈ ಕಾರ್ಯಕ್ರಮದಿಂದ ಪುತ್ತೂರು, ಸುಳ್ಯ, ಕಡಬ ತಾಲೂಕುಗಳ ಶಾಂತಿ ಸೌಹಾರ್ಧತೆಗೆ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ವೇದಿಕೆ ಆಗ್ರಹಿಸಿದೆ.
ನಿಯೋಗದಲ್ಲಿ ಮಾನವಬಂಧುತ್ವ ವೇದಿಕೆ ಸಂಚಾಲಕ ಅಮಳ ರಾಮಚಂದ್ರ, ಪದಾಧಿಕಾರಿಗಳಾದ ಎಚ್.ಮಹಮ್ಮದ್ ಆಲಿ, ಉಲ್ಲಾಸ್ ಕೋಟ್ಯಾನ್, ಮೌರೀಸ್ ಮಸ್ಕರೇನಸ್, ಅಮರಾಥ್ ಗೌಡ, ಮಹಮ್ಮದ್ ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.







