Friday, September 4, 2026
spot_imgspot_img
spot_imgspot_img

ಕಾಸರಗೋಡು: ಆಟವಾಡುತ್ತಿದ್ದ ವೇಳೆ ಧ್ವಜಸ್ತಂಭದ ಹಗ್ಗ ಸಿಲುಕಿ 11 ವರ್ಷದ ಬಾಲಕ ಸಾವು

- Advertisement -
- Advertisement -

ಕಾಸರಗೋಡು: ಅಂಗನವಾಡಿ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಧ್ವಜಸ್ತಂಭಕ್ಕೆ ಕಟ್ಟಿದ್ದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿಕೊಂಡ ಪರಿಣಾಮ 11 ವರ್ಷದ ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆ ಕಾಸರಗೋಡಿನ ಮಡಿಕೈ ಸಮೀಪದ ಕಂಜಿಪೊಯಿಲ್‌ನಲ್ಲಿ ಗುರುವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ರಾಜೇಶ್ ಹಾಗೂ ನೀತು ದಂಪತಿಯ ಪುತ್ರ ಅನೇಕ್ ಎಂದು ಗುರುತಿಸಲಾಗಿದೆ. ಕಂಜಿಪೊಯಿಲ್‌ನ ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ಅನೇಕ್, ನಂದನಕುಳಿ ಅಂಗನವಾಡಿ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಗುರುವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಅನೇಕ್ ಅಂಗನವಾಡಿ ಮುಂಭಾಗದಲ್ಲಿ ಆಟವಾಡುತ್ತಿದ್ದನು. ಈ ವೇಳೆ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಹಗ್ಗ ಆಕಸ್ಮಿಕವಾಗಿ ಆತನ ಕುತ್ತಿಗೆಗೆ ಸಿಲುಕಿ ಬಿಗಿಯಾಗಿದೆ ಎಂದು ತಿಳಿದುಬಂದಿದೆ.

ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಆಟೋರಿಕ್ಷಾ ಚಾಲಕರೊಬ್ಬರು ಬಾಲಕನನ್ನು ಗಮನಿಸಿ ತಕ್ಷಣ ಹಗ್ಗದಿಂದ ಆತನನ್ನು ಬಿಡಿಸಿದ್ದಾರೆ. ಬಳಿಕ ಕೂಡಲೇ ಕಾಞಂಗಾಡ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಅನೇಕ್ ಮೃತಪಟ್ಟಿದ್ದಾನೆ.

ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಹಗ್ಗ ಕುತ್ತಿಗೆಗೆ ಸಿಲುಕಿಕೊಂಡು ಬಿಗಿಯಾದ ಪರಿಣಾಮ ಈ ದುರಂತ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಘಟನೆ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!