
ವಿಟ್ಲ: ಮಂಕುಡೆ–ಕುಡ್ತಮುಗೇರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿ, ಹಳೆ ವಿದ್ಯಾರ್ಥಿ ಯುವಕ ಮಂಡಲ (ರಿ.) ಹಾಗೂ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರ (ರಿ.) ಇದರ ವತಿಯಿಂದ ಸುವರ್ಣ ಸಂಭ್ರಮದ 4ನೇ ಮಂಕುಡೆ ಗಣೇಶೋತ್ಸವ ಸೆ.14ರಿಂದ 18ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.



ಮಂಕುಡೆಯ ಶ್ರೀ ವಿಷ್ಣುಮೂರ್ತಿ ಕಲಾಮಂಟಪದಲ್ಲಿ ನಡೆಯಲಿರುವ ಗಣೇಶೋತ್ಸವದ ಅಂಗವಾಗಿ ಸೆ.14ರಂದು ಬೆಳಗ್ಗೆ 8ಕ್ಕೆ ಗಣಪತಿ ಹವನ ಹಾಗೂ 9ಕ್ಕೆ ಶ್ರೀ ಗಣೇಶ ಪ್ರತಿಷ್ಠೆ ನೆರವೇರಲಿದೆ. ಸಂಜೆ 7ಕ್ಕೆ ಉದ್ಘಾಟನಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8ರಿಂದ ಶಿವಗಣೇಶ ಸಂಗೀತ ನೃತ್ಯ ವಿದ್ಯಾಲಯ, ಕಾಡುಮಠ ಹಾಗೂ ಶಿವಂ ನೃತ್ಯ ಕಲಾಕೇಂದ್ರ, ಮಂಜೇಶ್ವರ ಇವರಿಂದ ‘ನಾದ ನೃತ್ಯ ನಮನ’ ಕಾರ್ಯಕ್ರಮ ನಡೆಯಲಿದೆ.

ಸೆ.15ರಂದು ಬೆಳಗ್ಗೆ 9.30ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹರಿಕಥೆ ಮತ್ತು ‘ನಾಗ ಮಾಣಿಕ್ಯ’ ಸೇರಿದಂತೆ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಲಿವೆ.
ಸೆ.16ರಂದು ಬೆಳಗ್ಗೆ 6ರಿಂದ 108 ಕಾಯಿ ಗಣಪತಿ ಹವನ ನಡೆಯಲಿದ್ದು, ಬೆಳಗ್ಗೆ 11ಕ್ಕೆ ಗಣೇಶೋತ್ಸವ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಲಾದ ಮುಖಮಂಟಪದ ಲೋಕಾರ್ಪಣೆ ನಡೆಯಲಿದೆ.

ರಾತ್ರಿ 7.30ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ.
ಸೆ.17ರಂದು ಸಂಜೆ 7ರಿಂದ ಮೂಡಪ್ಪ ಸೇವೆಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ರಾತ್ರಿ 8ಕ್ಕೆ ಮೂಡಪ್ಪ ಸೇವೆಯ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8.30ರಿಂದ ತುಳುವೆರೆ ಉಡಲ್ ಜೋಡುಕಲ್ಲು ಇವರಿಂದ ‘ಡೆನ್ನ ಡೆನ್ನಾನ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.18ರಂದು ಬೆಳಗ್ಗೆ 8ಕ್ಕೆ ಮೂಡಪ್ಪ ಸೇವೆಯ ಪ್ರಸಾದ ವಿತರಣೆ, ಬೆಳಗ್ಗೆ 10ರಿಂದ ಮಂಕುಡೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೆಳಗ್ಗೆ 11.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಅಪರಾಹ್ನ 3ರಿಂದ ಶ್ರೀ ದೇವರ ದಿಗ್ವಿಜಯ ಮೆರವಣಿಗೆ ಹಾಗೂ ಜಲಸ್ಥಂಬನ ನಡೆಯಲಿದೆ.
ಗಣೇಶೋತ್ಸವದ ಎಲ್ಲ ದಿನಗಳಲ್ಲೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.








