
ಅಳಿಕೆ: ಅಳಿಕೆಯ ವಿದ್ಯಾಸಂಸ್ಥೆಯಲ್ಲಿ ವಿದ್ಯಾಗಣಪತಿ ಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಡಾ. ಕುಲದೀಪ್ ಶೆಟ್ಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಕಲಿತ ಮೌಲ್ಯಗಳು ಹಾಗೂ ಅವು ತಮ್ಮ ವೃತ್ತಿ ಜೀವನಕ್ಕೆ ನೀಡಿದ ಪ್ರೇರಣೆಯನ್ನು ವಿವರಿಸಿದರು.
ಕೃತಜ್ಞತೆ ಹಾಗೂ ಧನ್ಯತಾಭಾವದ ಮಹತ್ವವನ್ನು ತಮ್ಮ ವೃತ್ತಿ ಜೀವನದ ಅನುಭವಗಳ ಮೂಲಕ ತಿಳಿಸಿದ ಅವರು, ವಿದ್ಯಾರ್ಥಿಗಳು ತಮ್ಮ ವ್ಯಕ್ತಿಗತ ಬೆಳವಣಿಗೆಯ ಜೊತೆಗೆ ಸುತ್ತಮುತ್ತಲಿನ ಜನರು ಹಾಗೂ ಸಮಾಜದ ಬಗ್ಗೆಯೂ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಂಸ್ಥೆಯ ಸ್ಥಾಪಕಾಧ್ಯಕ್ಷರ ‘ಆತ್ಮಕಲ್ಯಾಣ–ಲೋಕಕಲ್ಯಾಣ’ ಧ್ಯೇಯವನ್ನು ಸ್ಮರಿಸಿದ ಅವರು, ಸಮಾಜಮುಖಿ ಚಿಂತನೆಯೊಂದಿಗೆ ಮುನ್ನಡೆಯುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ಮೆನೇಜಿಂಗ್ ಟ್ರಸ್ಟೀ ಕೆ.ಎಸ್. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಎಸ್. ಚಂದ್ರಶೇಖರ ಭಟ್ ಸ್ವಾಗತಿಸಿ, ವಂದಿಸಿದರು.
ಬಾಗೇಪಲ್ಲಿಯ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಪ್ರಭಾಕರ ರೆಡ್ಡಿ ಹಾಗೂ ಚಿಕ್ಕಬಳ್ಳಾಪುರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ಎಂ.ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಥೆಯ ಹಲವು ಹಿತೈಷಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.








