


ಬೀದರ್: ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.
ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಸುದರ್ಶನ ರಟಕಲ್ ಕೊಲೆಯಾದ ಯುವಕ. ಬಂಧಿತರನ್ನು ಭಾಗ್ಯವಾನ್, ವಿಠಲ್, ಸಚಿನ್, ಸಾಯಿ ಕಾಂಬ್ಳೆ ಹಾಗೂ ಆದಿತ್ಯ ಕಾಂಬ್ಳೆ ಎಂದು ಗುರುತಿಸಲಾಗಿದೆ.
ಭಾಲ್ಕಿ ಪಟ್ಟಣದ ಮಾಸುಮಪಾಶಾ ಕಾಲೋನಿಯಲ್ಲಿ ಯುವಕನನ್ನು ಐವರು ಆರೋಪಿಗಳು ಕಿಡ್ನಾಪ್ ಮಾಡಿದ್ದರು ಎನ್ನಲಾಗಿದೆ. ಬಳಿಕ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗಳು, ಮೃತದೇಹವನ್ನು ಕಡ್ಯಾಳ ಗ್ರಾಮದ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ತಂದು ಎಸೆದು ಪರಾರಿಯಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಹಾಗೂ ಭಾಲ್ಕಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಂಟಿಯಾಗಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಕೊಲೆಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಭಾಲ್ಕಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವಕನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ ಆರೋಪದಡಿ ಐವರ ವಿರುದ್ಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.








