
ಪುತ್ತೂರು, ಅ.31: ಯಶವಂತಪುರ–ಮಡಗಾಂವ್ ನಡುವೆ ಮಂಗಳೂರು ಜಂಕ್ಷನ್ ಮಾರ್ಗವಾಗಿ ಸಂಚರಿಸಲಿರುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಬಕ ಪುತ್ತೂರು ನಿಲ್ದಾಣದಲ್ಲಿ ವಾಣಿಜ್ಯ ನಿಲುಗಡೆ ಕಲ್ಪಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.ಪುತ್ತೂರಿನಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ ಕಲ್ಪಿಸುವಂತೆ ಹಿರಿಯ ನ್ಯಾಯವಾದಿ ಡಾ. ಅರುಣಾ ಶ್ಯಾಮ್ ಎಂ. ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸೆ.5ರಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಅ.7ರಂದು ಪ್ರತಿಕ್ರಿಯಿಸಿದ್ದ ಸಚಿವರು, ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ರೈಲ್ವೆ ವಿಭಾಗಕ್ಕೆ ಸೂಚಿಸಿರುವುದಾಗಿ ಪತ್ರದ ಮೂಲಕ ತಿಳಿಸಿದ್ದರು.
ಇದೀಗ ಅ.30ರಂದು ಹೊರಡಿಸಿರುವ ರೈಲ್ವೆ ಮಂಡಳಿಯ ಆದೇಶದಲ್ಲಿ 26655/26656 ಸಂಖ್ಯೆಯ ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಹಾಗೂ ನಿಲುಗಡೆಗಳನ್ನು ಅಂತಿಮಗೊಳಿಸಲಾಗಿದ್ದು, ಕಬಕ ಪುತ್ತೂರನ್ನು ವಾಣಿಜ್ಯ ನಿಲುಗಡೆ ಕೇಂದ್ರವಾಗಿ ಸೇರ್ಪಡೆಗೊಳಿಸಲಾಗಿದೆ.ಹೊಸ ರೈಲು ಯಶವಂತಪುರ, ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರಸ್ತೆ ಬೈಂದೂರು, ಮುರ್ಡೇಶ್ವರ, ಗೋಕರ್ಣ ರಸ್ತೆ, ಕಾರವಾರ ಮಾರ್ಗವಾಗಿ ಮಡಗಾಂವ್ ತಲುಪಲಿದೆ.
ಈ ನಿಲುಗಡೆಯಿಂದ ಪುತ್ತೂರು ಹಾಗೂ ಸುತ್ತಮುತ್ತಲಿನ ಭಾಗದ ಜನರಿಗೆ ಬೆಂಗಳೂರು ಮತ್ತು ಕರಾವಳಿ ಪ್ರದೇಶಗಳ ನಡುವೆ ವೇಗದ ರೈಲು ಸಂಪರ್ಕ ಲಭ್ಯವಾಗಲಿದೆ. ಅಲ್ಲದೆ, ಪ್ರವಾಸೋದ್ಯಮ, ವ್ಯಾಪಾರ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
ಪುತ್ತೂರಿನ ಪ್ರಯಾಣಿಕರ ಬಹುಕಾಲದ ಬೇಡಿಕೆಗೆ ಸ್ಪಂದನೆ ದೊರೆತಿದ್ದು, ಹೊಸ ವಂದೇ ಭಾರತ್ ರೈಲು ಸೇವೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ರೈಲು ಸಂಪರ್ಕ ಮತ್ತಷ್ಟು ಸುಧಾರಿಸಲಿದೆ.








