Saturday, October 31, 2026
spot_imgspot_img
spot_imgspot_img

ದೆಹಲಿ ಶೂ ಕಾರ್ಖಾನೆಯಲ್ಲಿ ಅಗ್ನಿ ಅವಘಡ – ನಾಲ್ವರು ಸಾವು

- Advertisement -
- Advertisement -

ನವದೆಹಲಿ: ಇಲ್ಲಿನ ಮಂಗೋಲ್‌ಪುರಿಯಲ್ಲಿರುವ ಶೂ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಶುಕ್ರವಾರ (ಅ.31) ರಾತ್ರಿ ಮಂಗೋಲ್‌ಪುರಿ ಕೈಗಾರಿಕಾ ಪ್ರದೇಶದ ಹಂತ-1ರಲ್ಲಿರುವ ಶೂ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ಖಾನೆಯ ಒಳಗೆ ಪ್ರಜ್ಞಾಹೀನರಾಗಿ ಪತ್ತೆಯಾದ ಗಾಯಾಳುಗಳನ್ನು ತಕ್ಷಣವೇ ಮಂಗೋಲ್‌ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ನಾಲ್ವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಉಳಿದ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಾತ್ರಿ 9.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಕಿ ಕಾಣಿಸಿಕೊಂಡಾಗ ಕಾರ್ಖಾನೆಯ ಒಳಗೆ ಸುಮಾರು 20 ರಿಂದ 25 ಮಂದಿ ಇದ್ದರು. ಇವರಲ್ಲಿ 18 ರಿಂದ 19 ಮಂದಿ ಹೊರಬರುವಲ್ಲಿ ಯಶಸ್ವಿಯಾದರು, ಆದರೆ ಆರು ಮಂದಿ ಕಟ್ಟಡದ ಒಳಗೆ ಸಿಲುಕಿಕೊಂಡರು ಎಂದು ತಿಳಿದುಬಂದಿದೆ.

ಗ್ರೌಂಡ್‌ ಫ್ಲೋರ್‌ನಲ್ಲಿ ಹೊತ್ತಿಕೊಂಡ ಬೆಂಕಿ, ಮೂರನೇ ಮಹಡಿಯವರೆಗೂ ವ್ಯಾಪಿಸಿತ್ತು. ಪಾದರಕ್ಷೆ ತಯಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕಗಳು ಮತ್ತು ಕಚ್ಚಾ ವಸ್ತುಗಳು ಇದ್ದಿದ್ದರಿಂದ ಬೆಂಕಿ ವೇಗವಾಗಿ ಹರಡಿರಬಹುದು ಎಂದು ಶಂಕಿಸಲಾಗಿದೆ.

- Advertisement -

Related news

error: Content is protected !!