


ಅಕ್ಟೋಬರ್ 23ರಂದು ಬಿಡುಗಡೆಯಾದ ಬನ ತುಳು ಸಿನಿಮಾ ಪ್ರೇಕ್ಷಕರ ಮನ ಗೆದ್ದು ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರದ ಪ್ರತಿಯೊಂದು ಪಾತ್ರವೂ ತನ್ನದೇ ಆದ ಛಾಪು ಮೂಡಿಸಿದ್ದರೂ, ವಿಶೇಷವಾಗಿ ಕೊನೆಯ ಹಂತದಲ್ಲಿ ಬರುವ ಅಮ್ಮ–ಮಗಳ ಎರಡು ಪಾತ್ರಗಳು ಪ್ರೇಕ್ಷಕರ ಗಮನ ಸೆಳೆದಿವೆ.
ಅಮೃತ ಅಮೀನ್ ಮತ್ತು ಭವ್ಯಶ್ರೀ ಪೂಜಾರಿ ಅವರ ಮನಮುಟ್ಟುವ ಅಭಿನಯ: ಚಿತ್ರದಲ್ಲಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮೃತ ಅಮೀನ್ ಆರನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಪ್ರತಿಭೆ. ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರೂ, ತನ್ನ ಮುಗ್ಧ ನೋಟ, ಸಹಜ ಅಭಿನಯ ಮತ್ತು ಭಾವನಾತ್ಮಕ ಅಭಿವ್ಯಕ್ತಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾಳೆ. ಪುಟ್ಟ ವಯಸ್ಸಿನಲ್ಲೇ ಇಂತಹ ಮನೋಜ್ಞ ಅಭಿನಯ ನೀಡಿರುವುದು ವಿಶೇಷ.
ಇನ್ನೊಂದೆಡೆ, ಅಮ್ಮನ ಪಾತ್ರದಲ್ಲಿ ನಟಿಸಿರುವ ಭವ್ಯಶ್ರೀ ಪೂಜಾರಿ ತಮ್ಮ ಅನುಭವಪೂರ್ಣ ಅಭಿನಯದಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಲವು ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿರುವ ಇವರು ತುಳು ಚಿತ್ರರಂಗದಲ್ಲಿ ಇದು ಮೂರನೇ ಸಿನಿಮಾ. ಚಿತ್ರದ ಕೊನೆಯ ದೃಶ್ಯಗಳಲ್ಲಿ ಅವರು ವ್ಯಕ್ತಪಡಿಸುವ ಭಾವನೆಗಳು ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುವಷ್ಟು ಪರಿಣಾಮಕಾರಿಯಾಗಿವೆ.
ಅಮ್ಮನ ಮಮತೆ, ಮಗಳ ಮುಗ್ಧತೆ, ಇಬ್ಬರ ನಡುವಿನ ಭಾವನಾತ್ಮಕ ಬಂಧನ ಈ ಎರಡು ಪಾತ್ರಗಳ ಮೂಲಕ ಅದ್ಭುತವಾಗಿ ತೆರೆಮೇಲೆ ಮೂಡಿಬಂದಿದೆ. ಸಿನಿಮಾ ಮುಗಿದ ನಂತರವೂ ಈ ಅಮ್ಮ–ಮಗಳ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಿವೆ.
ಒಟ್ಟಿನಲ್ಲಿ, ಅಮೃತ ಅಮೀನ್ ಅವರ ಮೊದಲ ಚಿತ್ರದಲ್ಲಿನ ಪ್ರತಿಭೆ ಹಾಗೂ ಭವ್ಯಶ್ರೀ ಪೂಜಾರಿ ಅವರ ಅನುಭವದ ಅಭಿನಯದ ಸಮ್ಮಿಲನವೇ ಬನ ಚಿತ್ರದ ಭಾವನಾತ್ಮಕ ಹೈಲೈಟ್ ಆಗಿದೆ. ಬನ ಸಿನಿಮಾ ಪ್ರೇಕ್ಷಕರ ಹೃದಯ ತಲುಪುತ್ತಾ ಹತ್ತೂರಿನಲ್ಲೂ ಸದ್ದು ಮಾಡುತ್ತಿದೆ.







