Tuesday, November 3, 2026
spot_imgspot_img
spot_imgspot_img

ವಕ್ಫ್ ತಿದ್ದುಪಡಿ ಕಾಯ್ದೆ 2025 | 5 ಪ್ರಮುಖ ಅರ್ಜಿಗಳ ಮಿತಿ ತೆರವು: ಹೊಸ ರಿಟ್ ಅರ್ಜಿ ಸಲ್ಲಿಸಲು ಮಧ್ಯಂತರ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಅವಕಾಶ

- Advertisement -
- Advertisement -

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಕೇವಲ ಐದು ಪ್ರಮುಖ ರಿಟ್ ಅರ್ಜಿಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸುವ ನಿರ್ಧಾರವನ್ನು ಸಡಿಲಿಸಿರುವ ನ್ಯಾಯಾಲಯ, ಮಧ್ಯಂತರ ಅರ್ಜಿಗಳಾಗಿ ಪರಿವರ್ತಿಸಲ್ಪಟ್ಟಿದ್ದ ಅರ್ಜಿದಾರರಿಗೆ ಹೊಸದಾಗಿ ಸ್ವತಂತ್ರ ರಿಟ್ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಹಾಗೂ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.2025ರ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ, ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ಮಾತ್ರ ಪ್ರಮುಖ ಅರ್ಜಿಗಳಾಗಿ ಪರಿಗಣಿಸಲಾಗಿತ್ತು. ಉಳಿದ ಸುಮಾರು 135 ಅರ್ಜಿಗಳನ್ನು ಮಧ್ಯಂತರ ಅರ್ಜಿಗಳಾಗಿ ಪರಿವರ್ತಿಸಲಾಗಿತ್ತು.

ವಿಚಾರಣೆ ವೇಳೆ ಹಿರಿಯ ವಕೀಲ ಡಾ. ಮೋಹನ್ ಗೋಪಾಲ್ ಅವರು, ಐದು ಪ್ರಮುಖ ಅರ್ಜಿಗಳಲ್ಲಿ ಕಾಯ್ದೆಯ ವಿರುದ್ಧದ ಎಲ್ಲಾ ಕಾನೂನು ಮತ್ತು ಸಾಂವಿಧಾನಿಕ ಆಕ್ಷೇಪಣೆಗಳು ಒಳಗೊಂಡಿಲ್ಲ. ಆದ್ದರಿಂದ ಮಧ್ಯಂತರ ಅರ್ಜಿದಾರರಿಗೂ ಸ್ವತಂತ್ರವಾಗಿ ವಾದ ಮಂಡಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.


ಇದಕ್ಕೆ ಸಂಬಂಧಿಸಿದಂತೆ ನ್ಯಾಯಪೀಠವು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದವರು ಎರಡು ವಾರಗಳೊಳಗೆ ಹೊಸ ರಿಟ್ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಅನುಮತಿ ನೀಡಿದೆ. ಅರ್ಜಿಗಳ ಪ್ರತಿಗಳನ್ನು ನೋಡಲ್ ಕೌನ್ಸಿಲ್‌ಗೆ ಸಲ್ಲಿಸುವಂತೆಯೂ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಲಿಖಿತ ವಾದಗಳು, ಅಫಿಡವಿಟ್‌ಗಳು ಹಾಗೂ ಪ್ರತಿಕ್ರಿಯೆಗಳನ್ನು 2026ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು 2027ರ ಜನವರಿ 21ಕ್ಕೆ ನಿಗದಿಪಡಿಸಲಾಗಿದೆ.

- Advertisement -

Related news

error: Content is protected !!