



ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಒದಗಿಸಲಾದ ಜೆಡ್-ಪ್ಲಸ್ (Z-plus) ಭದ್ರತೆಯ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅರ್ಜಿಯ ಉದ್ದೇಶದ ಬಗ್ಗೆ ನ್ಯಾಯಾಲಯವು ಪ್ರಶ್ನೆಗಳನ್ನು ಎತ್ತಿದೆ.ಭಾಗವತ್ ಅವರ ಭದ್ರತೆಗೆ ಪ್ರತಿ ತಿಂಗಳು ಸುಮಾರು ₹ 40 ಲಕ್ಷದಿಂದ ₹ 45 ಲಕ್ಷ ವೆಚ್ಚ ವೆಚ್ಚವಾಗುತ್ತಿದೆ ಎಂದು ವರದಿಯಾಗಿದೆ.
ಆರ್‌ಎಸ್‌ಎಸ್ ಒಂದು ನೋಂದಾಯಿತ ಸಂಸ್ಥೆಯಲ್ಲದ ಕಾರಣ, ಈ ಭದ್ರತೆಗಾಗಿ ಸಾರ್ವಜನಿಕ ಹಣವನ್ನು ಬಳಸುತ್ತಿರುವುದು ದುರುಪಯೋಗ ಮತ್ತು ಸರ್ಕಾರದ ಖಜಾನೆಗೆ ನಷ್ಟವಾಗುತ್ತಿದೆ ಎಂದು ನಾಗಪುರ ಪೀಠದ ಮುಂದೆ ಪಿಐಎಲ್ ಸಲ್ಲಿಸಲಾಗಿತ್ತು.
ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಅನಿಲ್ ಕಿಲೋರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅರ್ಜಿದಾರರ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಆದೇಶದ ವಿವರ ಇನ್ನಷ್ಟೇ ಹೊರಬರಬೇಕಿದೆ.
ನಾಗಪುರ ನಿವಾಸಿ ಲಾಲನ್ ಸಿಂಗ್ ಎಂಬವರು ಈ ಅರ್ಜಿ ಸಲ್ಲಿಸಿದ್ದರು. ನೋಂದಣಿಯಾಗದ ಸಂಸ್ಥೆಯ ವ್ಯಕ್ತಿಯೊಬ್ಬರಿಗೆ ಜೆಡ್-ಪ್ಲಸ್ ವಿವಿಐಪಿ ಭದ್ರತೆಯನ್ನು ಒದಗಿಸಲು ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಭದ್ರತೆಯ ಶುಲ್ಕವನ್ನು ಭಾಗವತ್ ಅವರಿಂದಲೇ ವಸೂಲಿ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.
ತಮ್ಮ ಮನವಿಯಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರಿಗೆ ಸಂಬಂಧಿಸಿದ 2023ರ ಸುಪ್ರೀಂ ಕೋರ್ಟ್ ತೀರ್ಪನ್ನು ಅರ್ಜಿದಾರರು ಉಲ್ಲೇಖ ಮಾಡಿದ್ದರು. ಅಂಬಾನಿಗೆ ಜೆಡ್-ಪ್ಲಸ್ ಭದ್ರತೆಯನ್ನು ಒದಗಿಸಬೇಕು, ಅದರ ಸಂಪೂರ್ಣ ವೆಚ್ಚವನ್ನು ಅವರ ಕುಟುಂಬವೇ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು ಎಂಬುದನ್ನು ಅವರು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು ಎಂದು ವರದಿ ಮೂಲಕ ತಿಳಿದು ಬಂದಿದೆ.








