Friday, November 13, 2026
spot_imgspot_img
spot_imgspot_img

2000ರಲ್ಲಿ ಗುತ್ತಿಗಾರಿನಲ್ಲಿ ನಡೆದಿದ್ದ ಚೂರಿ ಇರಿತ ಪ್ರಕರಣ: 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ ಕೇರಳದಲ್ಲಿ ಬಂಧನ

- Advertisement -
- Advertisement -

ಸುಬ್ರಹ್ಮಣ್ಯ: ಸುಮಾರು 26 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

2000ರ ಸೆಪ್ಟೆಂಬರ್ 10ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುತ್ತಿಗಾರಿನಲ್ಲಿ ಕೆಲಸದ ವಿಚಾರವಾಗಿ ಕೇರಳ ಮೂಲದ ಜೊಯ್, ಶೆಲ್ಟನ್ ಮತ್ತು ಟೋಮಿ ಅಲಿಯಾಸ್ ಥಾಮಸ್ ಎಂಬವರ ನಡುವೆ ಜಗಳ ನಡೆದಿತ್ತು.

ಈ ವೇಳೆ ಜೊಯ್ ಎಂಬಾತನಿಗೆ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಟೋಮಿ ಅಲಿಯಾಸ್ ಥಾಮಸ್ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 37/2000ರಂತೆ ಐಪಿಸಿ ಕಲಂ 302 ಮತ್ತು 34ರಡಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ಆರೋಪಿಯಾಗಿದ್ದ ಕೇರಳದ ತ್ರಿಶೂರ್ ನಿವಾಸಿ ಟೋಮಿ ಅಲಿಯಾಸ್ ಥಾಮಸ್ ಸುಮಾರು 26 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಈತನ ವಿರುದ್ಧ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು.ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸುಬ್ರಹ್ಮಣ್ಯ ಠಾಣೆಯ ಎಎಸ್ಐ ಸ್ಕರೀಯಾ, ಸುಳ್ಯ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಹರೀಶ್ (557) ಹಾಗೂ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಆದ್ರಾಂ (811) ಅವರ ತಂಡವು ನ.12ರಂದು ಕೇರಳದಲ್ಲಿ ಆರೋಪಿಯನ್ನು ಬಂಧಿಸಿದೆ.

ಬಳಿಕ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ.25ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದೆ.

- Advertisement -

Related news

error: Content is protected !!