Monday, November 16, 2026
spot_imgspot_img
spot_imgspot_img

ದೋಷಯುಕ್ತ ಬ್ರೇಕ್‌ಗಳೊಂದಿಗೆ 463 ಕಿ.ಮೀ. ಪ್ರಯಾಣಿಸಿದ ವಂದೇ ಭಾರತ್ ರೈಲು; ತನಿಖೆಗೆ ಆದೇಶ

- Advertisement -
- Advertisement -

ನವದೆಹಲಿ: ರೈಲಿನ ಬ್ರೇಕ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೂ ಖಾಲಿ ವಂದೇ ಭಾರತ್ ರೈಲೊಂದು ಸುಮಾರು 463 ಕಿ.ಮೀ. ದೂರ ಪ್ರಯಾಣಿಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಪೂರ್ವ ರೈಲ್ವೆ (SER) ವಲಯವು ಸಮಗ್ರ ತನಿಖೆಗೆ ಆದೇಶಿಸಿದೆ.ಅಕ್ಟೋಬರ್ 24ರಂದು ಜಾರ್ಖಂಡ್‌ನ ಹಟಿಯಾ ನಿಲ್ದಾಣದಿಂದ ಉತ್ತರ ಪ್ರದೇಶದ ಝಾನ್ಸಿಗೆ ಖಾಲಿ ವಂದೇ ಭಾರತ್ ರೈಲಿನ ಬೋಗಿಗಳನ್ನು ಸರಕು ಸಾಗಣೆ ರೈಲಿನ ಇಂಜಿನ್ ಮೂಲಕ ಕೊಂಡೊಯ್ಯಲಾಗುತ್ತಿತ್ತು.

ಈ ವೇಳೆ ರೈಲಿನ ಬ್ರೇಕ್ ವ್ಯವಸ್ಥೆಯನ್ನು ಇಂಜಿನ್‌ನ ಬ್ರೇಕ್ ವ್ಯವಸ್ಥೆಯೊಂದಿಗೆ ಸಮರ್ಪಕವಾಗಿ ಜೋಡಿಸಬೇಕಿತ್ತು. ಆದರೆ ರೈಲ್ವೆ ಸಿಬ್ಬಂದಿ ಈ ಕಾರ್ಯವನ್ನು ಸರಿಯಾಗಿ ನಿರ್ವಹಿಸಿರಲಿಲ್ಲ ಎಂದು ತಿಳಿದುಬಂದಿದೆ.

ಹಟಿಯಾದಿಂದ ಹೊರಟ ಬಳಿಕ ಲೋಕೋ ಪೈಲಟ್ ಬ್ರೇಕ್ ಪರೀಕ್ಷೆ ನಡೆಸಿದಾಗ ಬ್ರೇಕ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ರಾಂಚಿ ನಿಲ್ದಾಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು. ಬಳಿಕ ಮುರಿ ನಿಲ್ದಾಣದಿಂದ ರೈಲು ಚಲಾಯಿಸಿದ ಮತ್ತೊಬ್ಬ ಲೋಕೋ ಪೈಲಟ್ ಕೂಡ ಬ್ರೇಕ್ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಆದರೂ ರೈಲಿನ ಪ್ರಯಾಣ ಮುಂದುವರಿಸಲು ಅನುಮತಿ ನೀಡಲಾಗಿತ್ತು.ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣ ತಲುಪಿದ ಬಳಿಕ ರೈಲನ್ನು ಪರಿಶೀಲಿಸಿದಾಗ ಎಲ್ಲಾ ಬೋಗಿಗಳ ಬ್ರೇಕ್ ವ್ಯವಸ್ಥೆಯನ್ನು ಪ್ರತ್ಯೇಕಗೊಳಿಸಿರುವುದು ಪತ್ತೆಯಾಗಿದೆ. ಪರಿಣಾಮ ಬೋಗಿಗಳ ಬ್ರೇಕ್‌ಗಳು ಕಾರ್ಯನಿರ್ವಹಿಸಿರಲಿಲ್ಲ.

ಇಡೀ ಪ್ರಯಾಣದಲ್ಲಿ ಇಂಜಿನ್‌ನ ಬ್ರೇಕ್ ಹಾಗೂ ರೀಜನರೇಟಿವ್ ಬ್ರೇಕಿಂಗ್ ವ್ಯವಸ್ಥೆಯನ್ನೇ ಅವಲಂಬಿಸಲಾಗಿತ್ತು.ಪ್ರಾಥಮಿಕ ತನಿಖೆಯಲ್ಲಿ ರೈಲಿನ ನಿರ್ವಹಣಾ ಸಿಬ್ಬಂದಿ, ಸೆಕ್ಷನ್ ಮತ್ತು ಟ್ರಾಕ್ಷನ್ ಕಂಟ್ರೋಲರ್‌ಗಳು ಹಾಗೂ ರೈಲು ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದಿದೆ. ರೈಲು ಹೊರಡುವ ಮುನ್ನ ಬ್ರೇಕ್‌ಗಳ ಕಾರ್ಯನಿರ್ವಹಣೆಯನ್ನು ಭೌತಿಕವಾಗಿ ಪರಿಶೀಲಿಸದಿರುವುದು ಹಾಗೂ ಲೋಕೋ ಪೈಲಟ್‌ಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಿರುವುದು ಗಂಭೀರ ಲೋಪವೆಂದು ಗುರುತಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಘಟನೆಗೆ ಕಾರಣವಾದ ಲೋಪಗಳನ್ನು ಪತ್ತೆಹಚ್ಚಿ, ಜವಾಬ್ದಾರರನ್ನು ಗುರುತಿಸುವಂತೆ ರಾಂಚಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ತನಿಖೆ ನಡೆಸಲು ಸೂಚಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಆದೇಶಿಸಲಾಗಿದೆ.

- Advertisement -

Related news

error: Content is protected !!