Tuesday, November 17, 2026
spot_imgspot_img
spot_imgspot_img

ಕೇಂದ್ರದಿಂದ ಬರಬೇಕಾದ 2,186 ಕೋಟಿ ರೂ. ಅನುದಾನ: ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ ಸರಕಾರ ನಿರ್ಧಾರ

- Advertisement -
- Advertisement -

ಬೆಂಗಳೂರು: ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಬರಬೇಕಿರುವ 2,186.20 ಕೋಟಿ ರೂ. ಅನುದಾನ ಬಿಡುಗಡೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರಕಾರ ನಿರ್ಧರಿಸಿದೆ.

ಈ ಸಂಬಂಧ ಮಂಗಳವಾರ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿ ಕಾನೂನು ಕ್ರಮದ ಕುರಿತು ಚರ್ಚಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರಕಾರದೊಂದಿಗೆ ಸಂಘರ್ಷಕ್ಕೆ ಇಳಿಯುವ ಉದ್ದೇಶ ರಾಜ್ಯ ಸರಕಾರಕ್ಕಿಲ್ಲ. ಆದರೆ ರಾಜ್ಯಕ್ಕೆ ಬರಬೇಕಾದ 2,186.20 ಕೋಟಿ ರೂ. ಅನುದಾನ ನ್ಯಾಯಯುತ ಹಕ್ಕಾಗಿದ್ದು, ಅದನ್ನು ಪಡೆಯಲು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಲು ತೀರ್ಮಾನಿಸಲಾಗಿದೆ. ಮುಂದಿನ ವಾರದೊಳಗೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

2025ರ ಡಿಸೆಂಬರ್‌ನಿಂದಲೇ ಅನುದಾನ ಬಿಡುಗಡೆಗೆ ಕೋರಿ ರಾಜ್ಯ ಸರಕಾರ ಕೇಂದ್ರಕ್ಕೆ ಹಲವು ಬಾರಿ ಪತ್ರ ಬರೆದಿದೆ. ಮುಖ್ಯಮಂತ್ರಿ ಕೂಡ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಲಲ್ಲನ್ ಸಿಂಗ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ. ಆದರೂ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ತಾಂತ್ರಿಕ ಕಾರಣದ ನೆಪ

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರದ ಅನುದಾನ ಬಿಡುಗಡೆಯಾದ ಬಳಿಕ ರಾಜ್ಯ ಸರಕಾರ 10 ದಿನಗಳೊಳಗೆ ಅದನ್ನು ಪಂಚಾಯಿತಿಗಳಿಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ಬಡ್ಡಿ ಸಹಿತ ಪಾವತಿಸಬೇಕು. ಜೊತೆಗೆ ಹಣ ಸ್ವೀಕೃತಿಯ ವಿವರಗಳನ್ನು ಇ-ಗ್ರಾಮ ಸ್ವರಾಜ್ ಪೋರ್ಟಲ್‌ನಲ್ಲಿ ದಾಖಲಿಸಬೇಕು ಎಂಬ ನಿಯಮವಿದೆ.

2024-25ನೇ ಸಾಲಿನಲ್ಲಿ ಕೇಂದ್ರ ಸರಕಾರ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಿದ್ದ 2,133.25 ಕೋಟಿ ರೂ.ಗಳ ಪೈಕಿ 1,907 ಕೋಟಿ ರೂ.ಗಳ ಸ್ವೀಕೃತಿ ಮಾತ್ರ ಪೋರ್ಟಲ್‌ನಲ್ಲಿ ದಾಖಲಾಗಿದೆ. ಉಳಿದ 225 ಕೋಟಿ ರೂ.ಗಳ ವ್ಯತ್ಯಾಸಕ್ಕೆ ತಾಂತ್ರಿಕ ತೊಡಕು ಕಾರಣವಾಗಿದೆ. ಆದರೆ ಈ ಹಣವೂ ಭೌತಿಕವಾಗಿ ಗ್ರಾಮ ಪಂಚಾಯಿತಿಗಳಿಗೆ ತಲುಪಿದೆ. ಪೋರ್ಟಲ್‌ನಲ್ಲಿ ಮಾಹಿತಿ ಕಾಣಿಸದ ಕಾರಣಕ್ಕೆ ಅನುದಾನ ತಡೆಹಿಡಿಯುವುದು ಸರಿಯಲ್ಲ ಎಂದು ಸಚಿವರು ಪ್ರಶ್ನಿಸಿದರು.

ಇತರ ರಾಜ್ಯಗಳಿಗೆ ಅನುದಾನ ಬಿಡುಗಡೆ

ಕರ್ನಾಟಕಕ್ಕೆ ಅನ್ವಯಿಸುತ್ತಿರುವ ಷರತ್ತುಗಳನ್ನು ಇತರ ರಾಜ್ಯಗಳಿಗೂ ಸಮಾನವಾಗಿ ಅನ್ವಯಿಸುತ್ತಿಲ್ಲ ಎಂದು ಸಚಿವರು ಆಕ್ಷೇಪಿಸಿದರು. ಉತ್ತರಾಖಂಡಕ್ಕೆ 470 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಪೋರ್ಟಲ್‌ನಲ್ಲಿ ಸ್ವೀಕೃತಿ ದಾಖಲಾಗಿಲ್ಲ. ಗುಜರಾತ್‌ಗೆ 2,619 ಕೋಟಿ ರೂ. ಬಿಡುಗಡೆ ಮಾಡಿದ್ದು, 515 ಕೋಟಿ ರೂ.ಗಳ ಸ್ವೀಕೃತಿ ವ್ಯತ್ಯಾಸವಿದೆ. ಅಸ್ಸಾಂಗೆ 1,315 ಕೋಟಿ ರೂ. ಬಿಡುಗಡೆ ಮಾಡಿದ್ದು, 867 ಕೋಟಿ ರೂ. ವ್ಯತ್ಯಾಸವಿದೆ. ಬಿಹಾರಕ್ಕೆ 4,109 ಕೋಟಿ ರೂ. ಬಿಡುಗಡೆ ಮಾಡಿದ್ದು, 2,334 ಕೋಟಿ ರೂ.ಗಳ ಸ್ವೀಕೃತಿ ವ್ಯತ್ಯಾಸವಿದೆ ಎಂದು ಮಾಹಿತಿ ನೀಡಿದರು.

ಇತರ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿರುವಾಗ ಕರ್ನಾಟಕಕ್ಕೆ ಮಾತ್ರ ನಿರ್ಬಂಧ ವಿಧಿಸುತ್ತಿರುವುದು ತಾರತಮ್ಯದ ಕ್ರಮವಾಗಿದೆ. ಕೇಂದ್ರದೊಂದಿಗೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

- Advertisement -

Related news

error: Content is protected !!