


ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಮಹಿಳೆಯೊಬ್ಬರ ಹನಿಟ್ರ್ಯಾಪ್ಗೆ ಒಳಗಾಗಿ, ಭಾರತೀಯ ವಾಯುಪಡೆಯ ರಹಸ್ಯ ಮಿಲಿಟರಿ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ವಿಂಗ್ ಕಮಾಂಡರ್ ಶ್ರೇಣಿಯ ಅಧಿಕಾರಿಯೊಬ್ಬರು ಪೊಲೀಸರ ವಶದಲ್ಲಿದ್ದಾರೆ.ಪಾಕಿಸ್ತಾನದ ಏಜೆಂಟ್ ಎಂದು ಶಂಕಿಸಲಾದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಅಧಿಕಾರಿ, ಭಾರತೀಯ ವಾಯುಪಡೆಯ ರಹಸ್ಯ ಯುದ್ಧ ಯೋಜನೆಗಳು, ಡ್ರೋನ್ ಘಟಕಗಳ ಸಾಮರ್ಥ್ಯ, ಯುದ್ಧ ವಿಮಾನಗಳ ನಿಯೋಜನೆ, ಮಿಲಿಟರಿ ಕಸರತ್ತುಗಳು ಹಾಗೂ ಸೂಕ್ಷ್ಮ ಸೇನಾ ನೆಲೆಗಳ ಸ್ಥಳಗಳ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದ್ದಾರೆ.

ಜನವರಿ 12ರಿಂದ ಏಪ್ರಿಲ್ 1, 2026ರ ಅವಧಿಯಲ್ಲಿ ಅಧಿಕಾರಿ ವಾಟ್ಸಾಪ್ ಮೂಲಕ ಪಾಕಿಸ್ತಾನದ ಏಜೆಂಟ್ನೊಂದಿಗೆ ಸಂಪರ್ಕದಲ್ಲಿದ್ದು, ವರ್ಗೀಕೃತ ಮಿಲಿಟರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಏಪ್ರಿಲ್ 1ರಂದು ಕಚೇರಿಯೊಳಗೆ ಸ್ಮಾರ್ಟ್ಫೋನ್ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಯನ್ನು ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಪಾಕಿಸ್ತಾನದ ಏಜೆಂಟ್ ಅಧಿಕಾರಿಗೆ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದು, ಅದಕ್ಕೆ ಪ್ರತಿಯಾಗಿ ಅವರು ಭಾರತೀಯ ವಾಯುಪಡೆಯ ರಹಸ್ಯ ಯುದ್ಧ ಯೋಜನೆಯ ದಾಖಲೆಯ ಪುಟವೊಂದನ್ನು ಹಂಚಿಕೊಂಡಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ತನಗೆ ಕಳುಹಿಸುವ ಪ್ರತಿಯೊಂದು ಬೆತ್ತಲೆ ಫೋಟೋಗೆ ಪ್ರತಿಯಾಗಿ ಯುದ್ಧ ಯೋಜನೆಯ ದಾಖಲೆಗಳ ಒಂದೊಂದು ಪುಟವನ್ನು ನೀಡುವುದಾಗಿ ಅಧಿಕಾರಿ ಹೇಳಿದ್ದರೆಂದು ಪೊಲೀಸರು ಆರೋಪಿಸಿದ್ದಾರೆ.ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆಯಲ್ಲಿ ಅಧಿಕಾರಿ ಮತ್ತು ಪಾಕಿಸ್ತಾನದ ವ್ಯಕ್ತಿಯ ನಡುವೆ 3,008 ಪಠ್ಯ ಸಂದೇಶಗಳು, 65 ಫೋಟೋಗಳು, 42 ಧ್ವನಿ ಕರೆಗಳು, ನಾಲ್ಕು ವಿಡಿಯೋ ಕರೆಗಳು ಹಾಗೂ ಆರು ಯುಆರ್ಎಲ್ಗಳ ವಿನಿಮಯ ನಡೆದಿರುವುದು ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತ ರಹಸ್ಯಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅಧಿಕಾರಿ ಕಳೆದ ಐದು ತಿಂಗಳಿಂದ ಪೊಲೀಸ್ ವಶದಲ್ಲಿದ್ದಾರೆ.
ಸೂಕ್ಷ್ಮ ಮಿಲಿಟರಿ ಮಾಹಿತಿಯ ಸೋರಿಕೆಯ ಪ್ರಮಾಣ ಎಷ್ಟು ಎಂಬುದರ ಜೊತೆಗೆ, ಈ ಪ್ರಕರಣದಲ್ಲಿ ಇತರ ವ್ಯಕ್ತಿಗಳೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.








