Wednesday, November 18, 2026
spot_imgspot_img
spot_imgspot_img

ಬಂಟ್ವಾಳ: ತಲವಾರು ತೋರಿಸಿ 8.35 ಲಕ್ಷ ದರೋಡೆ ಮಾಡಿದ್ದ ಪ್ರಕರಣ – ಮೂವರು ಆರೋಪಿಗಳ ಬಂಧನ

- Advertisement -
- Advertisement -

ಬಂಟ್ವಾಳ: ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ಶಕ್ತಿನಗರ ನಿವಾಸಿ ಪ್ರವಿತ್ ಶೆಟ್ಟಿ, ಉಳ್ಳಾಲ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಹಾಗೂ ಉಳ್ಳಾಲ ಹರೇಕಳ ನಿವಾಸಿ ಶಾಕೀರ್ ಎಂದು ಗುರುತಿಸಲಾಗಿದೆ.

ಮಂಗಳೂರಿನ ಕಣ್ಣೂರಿನಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ (40) ಎಂಬವರು, ಕಳೆದ ಆಗಸ್ಟ್ 20ರಂದು ಸಂಸ್ಥೆಯ ವ್ಯವಹಾರದ ಹಣವನ್ನು ವಿವಿಧ ಅಂಗಡಿಗಳಿಂದ ಸಂಗ್ರಹಿಸಿಕೊಂಡು ಬೈಕ್‌ನಲ್ಲಿ ಹಿಂದಿರುಗುತ್ತಿದ್ದರು. ಕಕ್ಕೆಪದವಿನಿಂದ ಪಾಣೆಮಂಗಳೂರಿಗೆ ಬರುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 1 ಗಂಟೆಗೆ ಬಂಟ್ವಾಳ ಮಣಿನಾಲ್ಕೂರು ಮುಲ್ಕಾಜೆ ಮಾಡ ಎಂಬಲ್ಲಿ ತಲುಪಿದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ತಲವಾರು ತೋರಿಸಿ ಬೆದರಿಸಿ, ಅವರ ಬಳಿಯಿದ್ದ ರೂ. 8,35,000 ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಮಯ್ಯದಿ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 115/2026 ಕಲಂ: 309(6) BNS ಮತ್ತು ಕಲಂ: 25(1)(A) Arms Act ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ನೇತೃತ್ವದ ತಂಡ, ಮೂವರು ಆರೋಪಿಗಳನ್ನು ನ. 11ರಂದು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಆರೋಪಿಗಳನ್ನು ನ. 16ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ವೇಳೆ ರೂ. 2,01,000 ನಗದನ್ನು ವಶಪಡಿಸಿಕೊಂಡು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿತ ಪ್ರವಿತ್ ರಾಜ್ ಶೆಟ್ಟಿ ಎಂಬಾತನ ಗುರುತು ಪತ್ತೆ ಪರೇಡ್ ನಡೆಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!