Thursday, November 19, 2026
spot_imgspot_img
spot_imgspot_img

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರೀ ಮೇಜರ್ ಸರ್ಜರಿ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

- Advertisement -
- Advertisement -

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ, 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ವಿಭಾಗಗಳಾಗಿ ವಿಂಗಡಿಸಿ, ಪ್ರತ್ಯೇಕ ಪೊಲೀಸ್ ಆಯುಕ್ತರ ನೇಮಕ ಮಾಡಿರುವುದು ಪ್ರಮುಖ ಬೆಳವಣಿಗೆಯಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತದ ಬಳಿಕ ಬಿ. ದಯಾನಂದ್ ಅವರನ್ನು ಅಮಾನತುಗೊಳಿಸಿ, 1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಇದೀಗ ಅವರ ವರ್ಗಾವಣೆಯೊಂದಿಗೆ ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ.

ಬೆಂಗಳೂರು ನಗರವನ್ನು ಐದು ಪೊಲೀಸ್ ವಲಯಗಳಾಗಿ ವಿಂಗಡಿಸಿ ಕೇಂದ್ರ ಬೆಂಗಳೂರು ಆಯುಕ್ತರಾಗಿ ಲಾಭೂರಾಮ್, ಪೂರ್ವ ಬೆಂಗಳೂರು ಆಯುಕ್ತರಾಗಿ ಡಾ. ಪಿ.ಎಸ್. ಹರ್ಷ, ಪಶ್ಚಿಮ ಬೆಂಗಳೂರು ಆಯುಕ್ತರಾಗಿ ವಿಕಾಸ್ ಕುಮಾರ್ ವಿಕಾಸ್ ಹಾಗೂ ಉತ್ತರ ಬೆಂಗಳೂರು ಆಯುಕ್ತರಾಗಿ ಡಾ. ಎಂ.ಬಿ. ಬೋರಲಿಂಗಯ್ಯ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರು ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ ಸಿ. ವಂಶಿ ಕೃಷ್ಣ ಅವರಿಗೆ ದಕ್ಷಿಣ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ಬೆಂಗಳೂರು ನಗರ ಸಂಚಾರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಮೇಲ್ದರ್ಜೆಗೇರಿಸಲಾದ ಆ್ಯಂಟಿ ರೌಡಿ ಸ್ಕ್ವಾಡ್‌ನ ಆಯುಕ್ತ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ.

ರಾಜ್ಯ ಮಟ್ಟದ ಪೊಲೀಸ್ ಹುದ್ದೆಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಸಿಐಡಿ ಎಡಿಜಿಪಿಯಾಗಿದ್ದ ಬಿಜಯ್ ಕುಮಾರ್ ಸಿಂಗ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ. ಲೋಕಾಯುಕ್ತ ಎಡಿಜಿಪಿಯಾಗಿದ್ದ ಮನೀಶ್ ಖರ್ಬಿಕರ್ ಅವರನ್ನು ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗದ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿದ್ದ ಎಸ್. ಮುರುಗನ್ ಅವರನ್ನು ಲೋಕಾಯುಕ್ತ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ.

ಎನ್. ಶಶಿಕುಮಾರ್ ಅವರನ್ನು ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಹಾಗೂ ಅನುಪಮ್ ಅಗರ್ವಾಲ್ ಅವರನ್ನು ಕೆಎಸ್‌ಆರ್‌ಪಿ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಲಬುರಗಿ ಪೊಲೀಸ್ ಆಯುಕ್ತರಾಗಿದ್ದ ಡಾ. ಶರಣಪ್ಪ ಎಸ್.ಡಿ. ಅವರನ್ನು ರೈಲ್ವೆ ವಿಭಾಗದ ಡಿಐಜಿಯಾಗಿ ನೇಮಿಸಲಾಗಿದ್ದು, ಅವರ ಸ್ಥಾನಕ್ಕೆ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ಕಲಬುರಗಿ ಪೊಲೀಸ್ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ.

ಬೆಂಗಳೂರು ನಗರದ ಡಿಸಿಪಿ ಹುದ್ದೆಗಳಲ್ಲಿಯೂ ಹಲವು ಬದಲಾವಣೆಗಳಾಗಿವೆ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿಯಾಗಿದ್ದ ಸೈದುಲು ಅದಾವತ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್‌ಪಿಯಾಗಿ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಶ್ರೀಹರಿ ಬಾಬು ಬಿ.ಎಲ್. ಅವರನ್ನು ನೇಮಿಸಲಾಗಿದೆ. ಇಂದಿರಾನಗರ ಡಿಸಿಪಿಯಾಗಿ ಚೆನ್ನಬಸವಣ್ಣ ಲಂಗೋಟಿ, ಯಶವಂತಪುರ ಡಿಸಿಪಿಯಾಗಿ ನಾಗೇಶ್ ಡಿ.ಎಲ್., ಕೆಂಗೇರಿ ಡಿಸಿಪಿಯಾಗಿ ಯತೀಶ್ ಎನ್., ಪೀಣ್ಯ ಡಿಸಿಪಿಯಾಗಿ ಅಶೋಕ್ ಕೆ.ವಿ. ಹಾಗೂ ಗಾಂಧಿನಗರ ಡಿಸಿಪಿಯಾಗಿ ಲಕ್ಷ್ಮಿ ಗಣೇಶ್ ಕೆ. ಅವರನ್ನು ನೇಮಕ ಮಾಡಲಾಗಿದೆ.

ಇದಲ್ಲದೆ, ಡಾ. ಗೀತಾ ಎಂ.ಎಸ್. ಅವರನ್ನು ಪೂರ್ವ ಬೆಂಗಳೂರು ಡಿಸಿಪಿಯಾಗಿ, ವಿಕ್ರಮ್ ಅಮಟೆ ಅವರನ್ನು ಉತ್ತರ ಬೆಂಗಳೂರು ಡಿಸಿಪಿಯಾಗಿ ಹಾಗೂ ರಂಜಿತ್ ಕುಮಾರ್ ಭಂಡಾರು ಅವರನ್ನು ಆಡಳಿತ ವಿಭಾಗದ ಡಿಸಿಪಿಯಾಗಿ ನಿಯೋಜಿಸಲಾಗಿದೆ. ಸಂಚಾರ ವಿಭಾಗದಲ್ಲಿ ಪೂರ್ವ ವಲಯದ ಡಿಸಿಪಿಯಾಗಿ ಡಾ. ಅನೂಪ್ ಎ. ಶೆಟ್ಟಿ, ಕೇಂದ್ರ ವಲಯದ ಡಿಸಿಪಿಯಾಗಿ ಲೋಕೇಶ್ ಬಿ. ಜಗಲಾಸರ್ ಹಾಗೂ ಪಶ್ಚಿಮ ವಲಯದ ಡಿಸಿಪಿಯಾಗಿ ಪಿ.ವಿ. ಸ್ನೇಹಾ ಅವರನ್ನು ನೇಮಕ ಮಾಡಲಾಗಿದೆ.

ಇನ್ನು ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆಯಾಗಿರುವ ಸೀಮಂತ್ ಕುಮಾರ್ ಸಿಂಗ್ ಅವರು ತಮ್ಮ ಅಧಿಕಾರಾವಧಿಯ ಅನುಭವಗಳನ್ನು ಹಂಚಿಕೊಂಡು, ಸಹಕರಿಸಿದ ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು, ಸರ್ಕಾರ, ಮಾಧ್ಯಮಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಳೆದ ಒಂದೂವರೆ ವರ್ಷಗಳ ಕಾಲ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರುವುದು ತಮಗೆ ಅತ್ಯಂತ ತೃಪ್ತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಪ್ರತಿದಿನವೂ ಹೊಸ ಸವಾಲುಗಳು ಎದುರಾಗುತ್ತವೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ತಮ್ಮ ಇಡೀ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಸಾರ್ವಜನಿಕರ ಸಹಕಾರ ಹಾಗೂ ಹಿರಿಯ ಅಧಿಕಾರಿಗಳ ಬೆಂಬಲದಿಂದ ಹಲವು ಸವಾಲುಗಳನ್ನು ಎದುರಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಜಂಟಿ ಆಯುಕ್ತರು, ವಿಶೇಷ ಆಯುಕ್ತರು, ಡಿಸಿಪಿಗಳು, ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು, ಕಾನ್‌ಸ್ಟೇಬಲ್‌ಗಳು, ಹೋಮ್ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿದಂತೆ ಇಡೀ ಪೊಲೀಸ್ ತಂಡ ಹಗಲಿರುಳು ಶ್ರಮಿಸಿದೆ. ಒಬ್ಬ ವ್ಯಕ್ತಿಯಿಂದ ಮಾತ್ರ ಇಷ್ಟೆಲ್ಲ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ. ತಂಡದ ಸಹಕಾರದಿಂದಲೇ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು ಎಂದು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ಹಲವು ಮಹತ್ವದ ಹಾಗೂ ಸವಾಲಿನ ಪ್ರಕರಣಗಳನ್ನು ತಂಡ ಯಶಸ್ವಿಯಾಗಿ ಭೇದಿಸಿದೆ. ಬೆಂಗಳೂರನ್ನು ಮಾದಕವಸ್ತು ಮುಕ್ತ ನಗರವನ್ನಾಗಿಸುವುದು ಮತ್ತು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಲಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಪ್ರತಿ ಮಂಗಳವಾರ ನಡೆಸುತ್ತಿದ್ದ ಸಂವಾದ ಸಭೆಗಳು ಜನರಿಂದ ಪ್ರತಿಕ್ರಿಯೆ ಪಡೆಯಲು ಸಹಕಾರಿಯಾಗಿದ್ದವು ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರವನ್ನು ಐದು ವಿಭಾಗಗಳಾಗಿ ವಿಂಗಡಿಸಿರುವುದರಿಂದ ತಾವು ಅವಿಭಜಿತ ಬೆಂಗಳೂರಿನ ಕೊನೆಯ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದಂತಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಸಹಜ ಪ್ರಕ್ರಿಯೆಯಾಗಿದ್ದು, ನೂತನ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಹಾಗೂ ಐವರು ವಲಯ ಆಯುಕ್ತರ ತಂಡ ತಮ್ಮ ಅವಧಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಶುಭ ಹಾರೈಸಿದ್ದಾರೆ.

- Advertisement -

Related news

error: Content is protected !!